ಟಿ.ಆರ್. ಶರವಣ
ಸುಂಟಿಕೊಪ್ಪ, ಫೆ. 13: ಬಡ ಮಹಿಳೆಯರು ಆರ್ಥಿಕವಾಗಿ ಸದೃಢವಾಗಿ ಸ್ವಾವಲಂಬಿ ಜೀವನ ನಡೆಸಲು ಸ್ವಸಹಾಯ ಸಂಘದವರಿಗೆ ಸಾಲ ಯೋಜನೆ ಸಹಕಾರಿಯಾಗಲಿದೆ ಎಂದು ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ದೋದ್ದೇಶ ಸಹಕಾರ ಸಂಘದ ಸುಂಟಿಕೊಪ್ಪ ಶಾಖೆ, ಕುಶಾಲನಗರದ ಅಧ್ಯಕ್ಷ ಟಿ.ಆರ್. ಶರವಣ ಹೇಳಿದರು.
ಸುಂಟಿಕೊಪ್ಪ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿದ್ದೋದ್ದೇಶ ಸಹಕಾರ ಸಂಘದ ಶಾಖೆಯಲ್ಲಿ ಮಹಿಳಾ ಚೇತನಾ ಸಹಾಯ ಸಾಲ ಯೋಜನೆಯ ಪ್ರಾರಂಭೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರ ಸಂಘ ಒಳ್ಳೆಯ ಉದ್ದೇಶದಿಂದ ಮಹಿಳಾ ಸಬಲೀಕರಣಕ್ಕೆ ಸಾಲ ಸೌಲಭ್ಯ ಒದಗಿಸುತ್ತದೆ. ಮೈಕ್ರೋ ಫೈನಾನ್ಸ್ ರಿಸರ್ವ್ ಬ್ಯಾಂಕ್‍ನ ನಿರ್ದೇಶನಕ್ಕೆ ಒಳಪಟ್ಟು ಇಂತಿಷ್ಟೇ ಬಡ್ಡಿ ವಿಧಿಸಿ ಸಾಲ ನೀಡುತ್ತಿದೆ.
ಸ್ವಸಹಾಯ ಗುಂಪಿನವರು ಗುಂಪು ಯೋಜನೆ ವೈಯಕ್ತಿಕವಾಗಿ ಕೌಶಲ್ಯವನ್ನು ಕಲಿತು ಹಾಗೂ ವ್ಯಾಪಾರದಲ್ಲಿ ತೊಡಗಿಸಿಕೊಂಡು ಸಂಘದ ಸಾಲವನ್ನು ಪಡೆದು ಆರ್ಥಿಕವಾಗಿ ಚೇತರಿಕೆ ಕಂಡುಕೊಳ್ಳಬೇಕೆಂದು ಹೇಳಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶಾಹಿರ್, ಸದಸ್ಯರುಗಳಾದ ಸುರೇಶ್ ಕುಮಾರ್, ಅಮೃತ್ ವಿ.ಸಿ., ಬ್ಯಾಂಕಿನ ವ್ಯವಸ್ಥಾಪಕರುಗಳಾದ ಬಿ.ಡಿ. ಶ್ರೀಜೇಶ್, ಆರ್. ರಾಜ, ಜ್ಯೋತಿ ಹಾಗೂ ಸಿಬ್ಬಂದಿಗಳು ಇದ್ದರು. ಸ್ವಸಹಾಯ ಸಂಘದ ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡು ವ್ಯವಹಾರದ ಮಾಹಿತಿ ಪಡೆದುಕೊಂಡರು.