ಮಡಿಕೇರಿ, ಫೆ. 13: ಜಿಲ್ಲಾಮಟ್ಟದ ಅಂತರರಾಷ್ಟ್ರೀಯ ಯುನಾನಿ ದಿನಾಚರಣೆಯು ನಗರದ ಜಿಲ್ಲಾ ಆಯುಷ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಅಶ್ವಿನಿ ಆಸ್ಪತ್ರೆಯ ವೈದ್ಯ ಡಾ. ಪ್ರಕಾಶ್ ಕುಲಕರ್ಣಿ ಮತ್ತು ಸಂಘಟಿತ ಸಂಸ್ಥೆ ಪ್ರತಿನಿಧಿ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಹೆಚ್. ರಾಮಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಯುನಾನಿ ಚಿಕಿತ್ಸಾ ಪದ್ಧತಿಯು 12ನೇ ಶತಮಾನದಲ್ಲಿ ಭಾರತಕ್ಕೆ ಬಂದಿದ್ದು, ಆಯುರ್ವೇದದಂತೆಯೇ ಈ ಪದ್ಧತಿಯು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ.

ಉತ್ತಮ ಯುನಾನಿ ಚಿಕಿತ್ಸಕರಾಗಿದ್ದ ಹಕೀಂ ಅಜ್ಮಲ್‍ಖಾನ್ ಅವರ 150 ನೇ ಜನ್ಮ ದಿನದ ಪ್ರಯುಕ್ತ ನೆನಪಿನಲ್ಲಿ ಹಾಗೂ ಯುನಾನಿ ಔಷಧ ಪದ್ಧತಿಯ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಅಶ್ವಿನಿ ಆಸ್ಪತ್ರೆಯ ವೈದ್ಯ ಡಾ. ಪ್ರಕಾಶ್ ಕುಲಕರ್ಣಿ ಮಾತನಾಡಿ, ಎಲ್ಲಾ ವೈದ್ಯ ಪದ್ಧತಿಗಳ ಚಿಕಿತ್ಸಾ ಪದ್ಧತಿಯ ವಿವರಗಳು ವೈದ್ಯಕೀಯ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಳ್ಳುವು ದರಿಂದ ತನ್ನದೇ ಆದ ವೈಶಿಷ್ಟ್ಯತೆಯುಳ್ಳ ಔಷಧ ಪದ್ಧತಿಗಳು ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಈಶ್ವರಿ, ಬಲ್ಲಮಾವಟಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಆಡಳಿತ ವೈದ್ಯಾಧಿಕಾರಿ ಡಾ. ಕೆ.ಜಿ. ಶುಭಾ, ಅರಪಟ್ಟು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಆಡಳಿತ ವೈದ್ಯಾಧಿಕಾರಿ ಡಾ. ಜಿ. ಶೈಲಜಾ, ಜಿಲ್ಲಾ ಆಸ್ಪತ್ರೆಯ ಆಯುಷ್ ವಿಭಾಗದ ಡಾ. ಅರುಣ್ ಅಸೂಟಿ, ಡಾ. ರವಿಕುಮಾರ್, ಡಾ. ಪಲ್ಲವಿ ನಾಯಕ್, ಡಾ. ಸೌಪರ್ಣಿಕ ಇವರುಗಳು ಹಾಜರಿದ್ದು ಯುನಾನಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗಳಲ್ಲಿ ಅರಿವು ಮೂಡಿಸಲು ತಮ್ಮದೇ ಆದ ಚಿಕಿತ್ಸೆಯೊಂದಿಗೆ ಎಲ್ಲಾ ಚಿಕಿತ್ಸೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ವೀರಾಜಪೇಟೆ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಂ.ಬಿ. ಶ್ರೀನಿವಾಸ ನಿರೂಪಿಸಿ ಮಾತನಾಡಿ ಸತತವಾಗಿ ವೈದ್ಯಕೀಯ ಅಭ್ಯಾಸವನ್ನು, ರೋಗದ ಬಗ್ಗೆ ವಿಶೇಷ ಸಂವಾದವನ್ನು ಏರ್ಪಡಿಸುವುದರಿಂದ, ಬೇರೆಯ ವೈದ್ಯಕೀಯ ಚಿಕಿತ್ಸೆಗಳ ಅವಲೋಕನದಿಂದ, ಅಂತಹ ವಿದ್ಯೆಗಳ ಸಂಭಾಷಣೆಯಿಂದ ಉತ್ತಮವಾದ ಚಿಕಿತ್ಸೆ ಮಾಡಬಹುದಾಗಿದೆಯೆಂಬ ಆಯುರ್ವೇದ ಮಹರ್ಷಿ ಶ್ರೀಚರಕರವರ ಮಾತುಗಳನ್ನು ಉಲ್ಲೇಖಿಸಿದರು.

ಸಭೆಯಲ್ಲಿ ಜಿಲ್ಲಾ ಆಯುಷ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. ಸೋಮವಾರಪೇಟೆ ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ಮಿತಾ ವಂದಿಸಿದರು.