ಮಡಿಕೇರಿ, ಫೆ. 13: ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಮುರಳೀಧರ್ ಎಸ್. ಬಕ್ಕರವಳ್ಳಿ ಮೈಸೂರಿನಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದಿಂದ 2020-21ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆಯ ಅರ್ಜಿ ಕುರಿತು ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀಣಾ ಸದಸ್ಯರುಗಳಾದ ಹೆಚ್.ಎಂ. ಮಂಜುನಾಥ್, ಎಂ.ಡಿ. ರವಿ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಉಪಸ್ಥಿತರಿದ್ದ ಸಭೆಯಲ್ಲಿ ಕಾಫಿ ಬೆಳೆಗಾರರ ಪರವಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಹಲವಾರು ಬೇಡಿಕೆಗಳನ್ನು ಪ್ರಸ್ತಾಪಿಸಲಾಯಿತು.

10 ಹೆಚ್.ಪಿ.ವರೆಗಿನ ವಿದ್ಯುಚ್ಚಕ್ತಿ ಪಂಪ್‍ಸೆಟ್ ಹೊಂದಿರುವ ಕಾಫಿ ಬೆಳೆಗಾರರನ್ನು ಎಲ್.ಟಿ.4 ಸಿ ನಿಂದ ಎಲ್ ಟಿ.4 ಎ ಗೆ ಇತರ ರೈತರಂತೆ ಕಾಫಿ ಬೆಳೆಗಾರರಿಗೂ ಕೂಡಾ ಉಚಿತವಾಗಿ ಶುಲ್ಕ ರಹಿತ ವಿದ್ಯುತ್ ಪೂರೈಸಬೇಕು.

ಬಡ್ಡಿ ಮನ್ನಾ ಮತ್ತು ಉಳಿದ ಮೊತ್ತವನ್ನು ಸಮಾನ ಕಂತುಗಳಲ್ಲಿ ಪರಿವರ್ತಿಸಬೇಕು, ಎಲ್ಲಾ ತೋಟಗಳಲ್ಲಿ ಕಡಿಮೆ ಎತ್ತರದ 11 ಕೆ.ವಿ.ಎ. ಕಂಬವನ್ನು 9 ಮೀಟರ್‍ಗೆ ಬದಲಾಯಿಸಬೇಕು.

ಎಲ್ಲಾ ಅನುಮೋದಿತ ಯು.ಎನ್.ಐ.ಪಿ. ಟ್ರಾನ್ಸ್‍ಫಾರ್ಮರ್‍ನ್ನು ಫೆಬ್ರವರಿ ಅಂತ್ಯದೊಳಗೆ ಸ್ಥಾಪಿಸಬೇಕು. ಇದರಿಂದ ಕಾಫಿ ಹೂವಿನ ನೀರಾವರಿಗೆ ಸಹಾಯವಾಗುತ್ತದೆ.

ತೋಟದೊಳಗಿನ ಎಲ್ಲಾ 11 ಕೆ.ವಿ.ಎ. ಮಾರ್ಗಗಳನ್ನು ರಸ್ತೆ ಬದಿಗೆ ಬದಲಾಯಿಸಬೇಕು, ಇದು ಸಾಧ್ಯವಾಗದಿದ್ದರೆ ಕೇಬಲ್ ಆಗಿ ಬದಲಾಯಿಸಬೇಕು.

ಒಕ್ಕೂಟದ ಈ ಬೇಡಿಕೆಗಳಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ರೂ. 15 ಕೋಟಿಗಳ ವೆಚ್ಚ ಐ.ಪಿ. ಸೆಟ್‍ಗಳಿಗೆ ಬರುತ್ತಿದ್ದು ಇದನ್ನು ಸರ್ಕಾರವು ಮರುಪಾವತಿಸಿದರೆ ಎಲ್ಲಾ ಬೆಳೆಗಾರರಿಗೆ ಉಚಿತವಾಗಿ ವಿಸ್ತರಿಸಬಹುದು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಕಾರ್ಯಾಲಯ ದಿಂದ ಮಾಹಿತಿಗಾಗಿ ಪತ್ರ ಬಂದಿದ್ದು ಈಗಾಗಲೇ ಇಲಾಖೆಯಿಂದ ಮಾಹಿತಿ ಒದಗಿಸಿದ್ದೇವೆ. ಸರ್ಕಾರ ಅನುಮೋದನೆ ಕೊಟ್ಟರೆ ಉಚಿತವಾಗಿ ವಿತರಿಸಬಹುದು.

ಬಡ್ಡಿ ಮನ್ನಾ ಇಲಾಖೆಯ ಪೂರ್ವ ವೀಕ್ಷಣೆಯಲ್ಲಿಲ್ಲ. ಬಾಕಿ ಹಣವನ್ನು ತೆರವುಗೊಳಿಸಲು ಕಂತುಗಳಾಗಿ ವಿಸ್ತರಿಸಬಹುದು. ಯು.ಎನ್.ಐ.ಪಿ. ಅನುಮೋದಿತ ಟ್ರಾನ್ಸ್‍ಫಾರ್ಮರ್‍ಗಳ ಅನುಷ್ಟಾನಕ್ಕೆ ಇದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸಾಧ್ಯವಾದಷ್ಟು ಬೇಗ ಇವುಗಳನ್ನು ಸ್ಥಾಪಿಸಲಾಗುವುದು.

ಕಾಡಾನೆ ಪ್ರದೇಶಗಳಲ್ಲಿ ಕಂಬದ ಎತ್ತರವನ್ನು ಹೆಚ್ಚಿಸಲಾಗುತ್ತಿದೆ ಮತ್ತು ಅಗತ್ಯವಿರುವ ಕಡೆ ನಾವು ಅದನ್ನು ಮುಂದುವರೆಸುತ್ತೇವೆ.

ತೋಟದೊಳಗಿನ ಎಲ್ಲಾ 11 ಕೆವಿಎ ಮಾರ್ಗಗಳನ್ನು ಬದಲಾಯಿಸುವುದು ಅಥವಾ ಕೇಬಲ್‍ಗೆ ಪರಿವರ್ತಿಸುವುದು ಸಾಕಷ್ಟು ವೆಚ್ಚವನ್ನು ಉಂಟುಮಾಡುತ್ತದೆ.

ಅಗತ್ಯವಿದ್ದಲ್ಲಿ ಈ ವಿಚಾರವನ್ನು ಆದ್ಯತೆಯಾಗಿ ತೆಗೆದುಕೊಳ್ಳುತ್ತೇವೆ ಎಂದು ವ್ಯವಸ್ಥಾಪಕ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ ಭರವಸೆ ನೀಡಿರುವುದಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಮುರಳೀಧರ್ ಎಸ್. ಬಕ್ಕರವಳ್ಳಿ ತಿಳಿಸಿದ್ದಾರೆ.