ಶ್ರೀಮಂಗಲ: ನೆರೆ ರಾಜ್ಯ ಕೇರಳದಲ್ಲಿ ಮಾರಕ ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೆ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಗಡಿ ಪ್ರದೇಶ ಮತ್ತು ಕೇರಳ – ಕೊಡಗು ಸಂಪರ್ಕದ ಮುಖ್ಯ ಹೆದ್ದಾರಿಗಳಲ್ಲಿ ಈ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ.
ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀಮಂಗಲ ಗ್ರಾ.ಪಂ. ವತಿಯಿಂದ ಪಟ್ಟಣದಲ್ಲಿ ಈ ಸೋಂಕಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ.
ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ ಕೆಂಪರಾಜ್ ಅವರು ಸಾರ್ವಜನಿಕರಿಗೆ ಬಿತ್ತಿ ಪತ್ರ ಹಾಗೂ ಘೋಷಣೆ ಮಾಡುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭ ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷೆ ಚೋಕಿರ ಕಲ್ಪನಾ ತಿಮ್ಮಯ್ಯ, ಸ್ಥಳೀಯ ಗ್ರಾ.ಪಂ.ನ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಟಿ. ಶೆಟ್ಟಿಗೇರಿ-ಬಿರುನಾಣಿ: ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಿರುನಾಣಿ ಮತ್ತು ಟಿ.ಶೆಟ್ಟಿಗೇರಿ ಗ್ರಾ.ಪಂ. ವತಿಯಿಂದ ನೋವೆಲ್ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ಕಿರಿಯ ಆರೋಗ್ಯ ಸಹಾಯಕ ಟಿ.ಆರ್. ಅವಿನಾಶ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಟಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮಂತ್, ರೈತ ಸಂಘ ಹಸಿರು ಸೇನೆಯ ಅಪ್ಪಚ್ಚಂಗಡ ಮೋಟಯ್ಯ, ಕಿರಿಯ ಆರೋಗ್ಯ ಸಹಾಯಕಿ ಬಿ.ಎ. ಕಾವೇರಮ್ಮ, ಕೆ.ಆರ್. ಲಷೀತಾ, ಆಶಾ ಕಾರ್ಯಕರ್ತೆ ಎಂ.ಟಿ. ವೀಣಾ ಹಾಜರಿದ್ದರು.
ಕರಿಕೆ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಗಡಿ ಗ್ರಾಮ ಕರಿಕೆಯಲ್ಲಿ ದಿನನಿತ್ಯ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರದ ವೈದ್ಯಾಧಿಕಾರಿ ಡಾ. ಪುಂಡಲಿ ಕೃಷ್ಣ ಅವರ ನೇತೃತ್ವದಲ್ಲಿ ಆರೋಗ್ಯ ಸಹಾಯಕಿ ಜಯಕುಮಾರಿ ಹಾಗೂ ಆಶಾ ಕಾರ್ಯಕರ್ತೆಯರಾದ ಮಮತಾ ಪುಟ್ಟಾ, ಸುಶೀಲಾ, ಅಶ್ವಿನಿ, ಮೇನಕಾ, ಮಮತಾ ಕಳೆದ ಐದಾರು ದಿನಗಳಿಂದ ಗಡಿ ಭಾಗದ ಚೆಂಬೇರಿ ಚೆಕ್‍ಪೋಸ್ಟ್ ಬಳಿ ಕೇರಳದಿಂದ ಬರುವ ವಾಹನಗಳ ಪ್ರಯಾಣಿಕರಿಗೆ ಕರಪತ್ರಗಳನ್ನು ನೀಡಿ ವೈರಸ್ ಹರಡುವ ಲಕ್ಷಣಗಳು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ರೋಗಲಕ್ಷಣ ಕಂಡು ಬಂದಲ್ಲಿ ವೈದ್ಯಾಧಿಕಾರಿಗೆ ಮಾಹಿತಿ ನೀಡುವಂತೆ ಡಾ. ಪುಂಡಲಿಕ ಮನವಿ ಮಾಡಿದ್ದಾರೆ.