ಆಲೂರು-ಸಿದ್ದಾಪುರ, ಫೆ. 13: ಗ್ರಾಮ ಪಂಚಾಯಿತಿ ನೀರುಗಂಟಿ ನೌಕರರು ಸೇರಿದಂತೆ ಗ್ರಾ.ಪಂ. ಸಿಬ್ಬಂದಿಗಳಿಗೆ ಈ ಹಿಂದೆ ಸರಕಾರ ವೇತನ ನಿಗದಿಪಡಿಸಿ ಆದೇಶ ಮಾಡಿದ್ದರೂ ಸಂಬಂಧಪಟ್ಟವರು ಇಲಾಖೆ, ಅಧಿಕಾರಿಗಳು ಸರಕಾರದ ಆದೇಶವನ್ನು ಜಾರಿಗೊಳಿಸ ದಿರುವುದನ್ನು ವಿರೋಧಿಸಿ ಸಾಂಕೇತಿಕವಾಗಿ ಆಲೂರು-ಸಿದ್ದಾಪುರ ಗ್ರಾ.ಪಂ. ಕಚೇರಿ ಎದುರು ನೀರುಗಂಟಿ ನೌಕರರು ಪ್ರತಿಭಟನೆ ನಡೆಸಿದರು. ಗ್ರಾ.ಪಂ. ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ನೇತೃತ್ವದಲ್ಲಿ ಆಲೂರುಸಿದ್ದಾಪುರ ಗ್ರಾ.ಪಂ.ಯ 16 ಮಂದಿ ನೀರುಗಂಟಿ ನೌಕರರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹಿಂದಿನ ಸರಕಾರ ಗ್ರಾ.ಪಂ. ನೀರುಗಂಟಿ ನೌಕರರು, ಬಿಲ್‍ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ಮತ್ತು ಸಿಬ್ಬಂದಿಗಳಿಗೆ ಕನಿಷ್ಟ ರೂ. 10 ಸಾವಿರದಿಂದ 13 ಸಾವಿರವರೆಗೆ ವೇತನ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶ ನೀಡಿತು. ಆದರೆ ಈಗ ಕೆಲವು ಗ್ರಾ.ಪಂ.ಗಳಲ್ಲಿ ಸರಕಾರ ನೀಡಿದ್ದ ಆದೇಶವನ್ನು ಜಾರಿಗೊಳಿಸಿಲ್ಲ, ನೀರುಗಂಟಿ ನೌಕರರಿಗೆ ಈಗಲೂ 10 ವರ್ಷದ ಹಿಂದೆ ಕೊಡುತ್ತಿದ್ದ ರೂ. 3 ಸಾವಿರ ವೇತನವನ್ನೆ ಕೊಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಗ್ರಾ.ಪಂ. ಮತ್ತು ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣವಾಗಿದೆ ಎಂದು ಗ್ರಾ.ಪಂ. ನೌಕರರ ಆರೋಪವಾಗಿದೆ.

ಆಲೂರು-ಸಿದ್ದಾಪುರ ಗ್ರಾ.ಪಂ. ಯಲ್ಲಿ 16 ಮಂದಿ ನೀರುಗಂಟಿ ನೌಕರರು ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಕೆಲವು ನೌಕರರು 25 ವರ್ಷದ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ರೂ. 300 ವೇತನ ನೀಡುತ್ತಿದ್ದ ನೌಕರರಿಗೆ ಈಗ 3 ಸಾವಿರ ಕೊಡುತ್ತಿದ್ದಾರೆ. ನೀರುಗಂಟಿ ನೌಕರರಿಗೆ ರೂ. 10 ಸಾವಿರ ವೇತನ ಕೊಡುವಂತೆ ಪರಿಷ್ಕರಣೆಯಾಗಿದ್ದರೂ ಆಲೂರು-ಸಿದ್ದಾಪುರ ಗ್ರಾ.ಪಂ.ಯಲ್ಲಿ ಕೇವಲ 3 ಸಾವಿರ ಕೊಡುತ್ತಿದ್ದಾರೆ, ಈ ಬಗ್ಗೆ ಸಂಬಂಧಪಟ್ಟ ಗ್ರಾ.ಪಂ. ಅಧಿಕಾರಿ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಲೂರು-ಸಿದ್ದಾಪುರ ಗ್ರಾ.ಪಂ. ನೀರುಗಂಟಿ ನೌಕರರ ಸಂಘದ ಅಧ್ಯಕ್ಷ ಚನ್ನಬಸಪ್ಪ ದೂರಿದ್ದಾರೆ. ಗ್ರಾ.ಪಂ. ನೌಕರರ ವೇತನ ಪರಿಷ್ಕರಣೆ ಆದೇಶ ಜಾರಿಗೊಳಿಸುವುದು ಸೇರಿದಂತೆ ಗ್ರಾ.ಪಂ. ನೌಕರರ ಬೇಡಿಕೆಗಳಿಗೆ ಸರಕಾರ, ಅಧಿಕಾರಿಗಳು ಸ್ಪಂದಿಸಬೇಕು, ಇಲ್ಲದಿದಲ್ಲಿ ತಾ. 24 ರಂದು ಜಿಲ್ಲಾ ಕೇಂದ್ರದಲ್ಲಿ ಗ್ರಾ.ಪಂ. ನೌಕಕರು ಕರ್ತವ್ಯ ತ್ಯಜಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಜಿಲ್ಲಾ ಸಂಘಟನೆ ಅಧ್ಯಕ್ಷ ಭರತ್ ಎಚ್ಚರಿಸಿದ್ದಾರೆ. ಈ ಕುರಿತು ಪ್ರತಿಭಟನೆಗಾರರು ಗ್ರಾ.ಪಂ. ಪಿಡಿಒ ಪೂರ್ಣಿಮಾ ಅವರಿಗೆ ಮನವಿ ಪತ್ರ ನೀಡಿದರು.