ಪೆÇನ್ನಂಪೇಟೆ, ಫೆ. 13: ನೈಸರ್ಗಿಕ ಕೊಡುಗೆಯಾಗಿರುವ ನೀರು ಪ್ರತಿಯೊಬ್ಬ ನಾಗರಿಕರ ಮೂಲಭೂತ ಸೌಲಭ್ಯದಲ್ಲಿ ಒಂದಾಗಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಬಾರದು. ಈ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಬಾಳೆಲೆ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯ ಬಿ.ಎನ್. ಪ್ರಥ್ಯು ಹೇಳಿದರು.
ಕುಟ್ಟ ಸಮೀಪದ ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರಿಜನ ಪ್ರದೇಶವಾದ ಗದ್ದೆ ಹಾಡಿಯಲ್ಲಿ ಜಿಲ್ಲಾ ಪಂಚಾಯತಿಯ ಅಧೀನದ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ವತಿಯಿಂದ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. 17 ಲಕ್ಷ ವೆಚ್ಚದ 50 ಸಾವಿರ ಲೀಟರ್ ನೀರಿನ ಸಾಮಥ್ರ್ಯವುಳ್ಳ ಟ್ಯಾಂಕ್ ಮತ್ತು ಕಿರು ನೀರು ಸರಬರಾಜು ಯೋಜನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಜನತೆಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ.
ಅದರಲ್ಲೂ ಗಿರಿಜನರು ಮೂಲಭೂತ ಸೌಲಭ್ಯದಿಂದ ಯಾವುದೇ ಕಾರಣಕ್ಕೂ ವಂಚಿತರಾಗಬಾರದು. ಈ ಕಾರಣದಿಂದಾಗಿ ಈ ಭಾಗದ ಕುಡಿಯುವ ನೀರಿನ ಬಹುಕಾಲದ ಬೇಡಿಕೆಯಾಗಿದ್ದ ಕಿರು ನೀರು ಸರಬರಾಜು ಯೋಜನೆಯನ್ನು ಜಾರಿಗೆ ತರಲಾಗಿದೆ. ಯೋಜನೆ ಅನುಷ್ಠಾನಗೊಂಡ ಬಳಿಕ ಇದನ್ನು ಹಾಡಿವಾಸಿಗಳ ಸ್ವಂತ ಆಸ್ತಿ ಎಂದು ಪರಿಗಣಿಸಿ ನಿರ್ವಹಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಬೇಸಿಗೆ ಆರಂಭಗೊಂಡಿದ್ದರೂ ಕುಡಿಯುವ ನೀರಿನ ಯೋಜನೆಗಾಗಿ ಸರಕಾರದಿಂದ ಜಿಲ್ಲಾ ಪಂಚಾಯಿತಿಗೆ ಯಾವುದೇ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಆದ್ದರಿಂದ ರಾಜ್ಯದ ಹಲವು ಜಿಲ್ಲೆಗಳ ನೀರಿನ ಅಹಾಕಾರವನ್ನು ನೀಗಿಸುವ ಕೊಡಗು ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕೆ ಸರಕಾರ ವಿಶೇಷ ಕಾಳಜಿ ವಹಿಸಿ ಕೂಡಲೇ ಅನುದಾನ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಇದುವರೆಗೂ ಬಾಳೆಲೆ ಕ್ಷೇತ್ರದಲ್ಲಿ 8 ಕಿರು ನೀರು ಸರಬರಾಜು ಯೋಜನೆಯನ್ನು ಜಾರಿಗೆ ತರಲಾಗಿದೆ. ಕ್ಷೇತ್ರವೊಂದರಲ್ಲಿ ಮೊದಲ ಬಾರಿಗೆ 8 ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಇಡೀ ಜಿಲ್ಲೆಯಲ್ಲೇ ಬಾಳೆಲೆ ಕ್ಷೇತ್ರ ಮೊದಲ ಸ್ಥಾನದಲ್ಲಿದೆ ಎಂದು ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕುಟ್ಟ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಮಾತನಾಡಿ, ಕುಡಿಯುವ ನೀರಿಗಾಗಿ ಶಾಶ್ವತ ಯೋಜನೆ ರೂಪಿತವಾಗದಿದ್ದರೆ ಮುಂದಿನ ಪೀಳಿಗೆ ಭಾರಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ ಕುಡಿಯುವ ನೀರಿಗೆ ಭವಿಷ್ಯದಲ್ಲಿ ಆತಂಕ ಕಾಡಲಿದೆ. ಆದ್ದರಿಂದ ಜನತೆ ಈ ಬಗ್ಗೆ ಜಾಗೃತರಾಗಿ ಅಂತರ್ಜಲ ಮಟ್ಟ ಏರಿಸುವ ಕುರಿತು ಅಗತ್ಯ ಮಾರ್ಗೋಪಾಯಗಳನ್ನು ಸ್ವಯಂಪ್ರೇರಣೆಯಿಂದ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಪಲ್ವಿನ್ ಪೂಣಚ್ಚ, ಕೆ.ಬಾಡಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಉಪಾಧ್ಯಕ್ಷ ಸಿ.ಡಿ. ಬೋಪಣ್ಣ, ಸದಸ್ಯರಾದ ರಾಧಾ, ಗದ್ದೆಹಾಡಿ ಪ್ರಮುಖರಾದ ರಾಮು, ರಾಜು ಮೊದಲಾದವರು ಉಪಸ್ಥಿತರಿದ್ದರು.
ಕೆ. ಬಾಡಗ ಗ್ರಾಮ ಪಂಚಾಯಿತಿಯ ಪಿಡಿಒ ಸೆಲ್ವಿನ್ ಅವರು ಸ್ವಾಗತಿಸಿದರು. ಬೋಪಣ್ಣ ಅವರು ವಂದಿಸಿದರು.