ಕುಶಾಲನಗರ, ಫೆ. 13: 2019-20ನೇ ಸಾಲಿನ ಮಳೆಹಾನಿ ಅನುದಾನದಲ್ಲಿ ಕುಶಾಲನಗರದ ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು 2 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ 19 ಕಾಮಗಾರಿಗಳಿಗೆ ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯರ ಸಮ್ಮುಖದಲ್ಲಿ ಭೂಮಿಪೂಜೆ ನಡೆಯಿತು.

ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ರಂಜನ್, ನೆರೆಪ್ರವಾಹಕ್ಕೆ ಪಟ್ಟಣ ಭಾಗಶಃ ಮುಳುಗಡೆಯಾಗಿತ್ತು. ಇದರಿಂದ ನದಿ ಅಂಚಿನ ಬಡಾವಣೆಗಳ ಜನರು ತೀವ್ರ ತೊಂದರೆಗೆ ಒಳಗಾಗಿದ್ದರು. ಜೊತೆಗೆ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿತ್ತು.

ಸರಕಾರ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವುದರ ಜೊತೆಗೆ ಮಳೆಯಿಂದ ಹಾನಿಯಾಗಿರುವ ರಸ್ತೆ, ಚರಂಡಿಗಳ ಅಭಿವೃದ್ಧಿಗೆ ಕೋಟ್ಯಂತರ ಅನುದಾನವನ್ನು ಕಲ್ಪಿಸಿದೆ. ಸುಮಾರು ರೂ.2 ಕೋಟಿ ಅನುದಾನದಲ್ಲಿ ಪ.ಪಂ.ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೂ ಅನುದಾನ ಒದಗಿಸಲಾಗಿದೆ.

ಈ ಅನುದಾನದಲ್ಲಿ ಗುಣಮಟ್ಟದ ರಸ್ತೆಗಳು ನಿರ್ಮಾಣ ವಾಗುವಂತೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಈ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುವಂತೆ ಎಚ್ಚರವಹಿಸಬೇಕೆಂದು ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.

ಕುಶಾಲನಗರದ ಓಂಕಾರ್ ಬಡಾವಣೆ, ಬಸಪ್ಪ ಬಡಾವಣೆ, ಮಾರುಕಟ್ಟೆ ವ್ಯಾಪ್ತಿಯ ರಸ್ತೆಗಳು, ಬಾಪೂಜಿ ಬಡಾವಣೆ, ರಸೂಲ್ ಬಡಾವಣೆ, ಸಿಂಗಾರಮ್ಮ ಬಡಾವಣೆ, ಇಂದಿರಾ ಬಡಾವಣೆ, ದಂಡಿನಪೇಟೆ, ಬೈಚನಹಳ್ಳಿ, ಯೋಗಾನಂದ ಬಡಾವಣೆ, ಕಲಾಭವನದ ಮುಂಭಾಗದ ರಸ್ತೆ, ಕರಿಯಪ್ಪ ಬಡಾವಣೆ, ನೆಹರೂ ಬಡಾವಣೆ, ರಾಧಾಕೃಷ್ಣ ಬಡಾವಣೆಗಳ ವ್ಯಾಪ್ತಿಯಲ್ಲಿ ಅಡ್ಡ ರಸ್ತೆಗಳು ಮತ್ತು ಮುಖ್ಯರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಇದೇ ಸಂದರ್ಭ ಗುಡ್ಡೆಹೊಸೂರು-ಸಿದ್ದಾಪುರ ಮಾರ್ಗದ 1 ಕಿಮೀ ವ್ಯಾಪ್ತಿಗೆ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭ ಪ.ಪಂ. ಸದಸ್ಯರಾದ ಸುರೇಶ್, ಡಿ.ಕೆ. ತಿಮ್ಮಪ್ಪ, ಖಲೀಮುಲ್ಲಾ, ಬಿ. ಜಯವರ್ಧನ್, ಜಯಲಕ್ಷ್ಮಿ, ರೇಣುಕಾ, ಜಗದೀಶ್, ಜಯಲಕ್ಷ್ಮಮ್ಮ, ಸುಂದರೇಶ್, ಶೈಲಾ ಕೃಷ್ಣಪ್ಪ, ರೂಪ ಉಮಾಶಂಕರ್, ಮುಖ್ಯಾಧಿಕಾರಿ ಎಸ್.ಎಂ. ಸುಜಯ್ ಕುಮಾರ್, ಇಂಜಿನಿಯರ್ ಶ್ರೀದೇವಿ, ಆರೋಗ್ಯ ನಿರೀಕ್ಷಕ ಉದಯಕುಮಾರ್, ಎಪಿಎಂಸಿ ಅಧ್ಯಕ್ಷ ರಮೇಶ್, ಮುಖಂಡರಾದ ಕೆ.ಜಿ. ಮನು, ಹೆಚ್.ಡಿ. ಶಿವಾಜಿರಾವ್, ಎಂ.ಡಿ. ಕೃಷ್ಣಪ್ಪ, ಎಂ.ಎನ್. ಕುಮಾರಪ್ಪ, ಮನುರೈ, ಪುಂಡಾರೀಕಾಕ್ಷ, ಎಂ.ಎಂ. ಚರಣ್, ವಿ.ಎನ್. ವಸಂತ ಕುಮಾರ್, ಉಮಾಶಂಕರ್, ವೈಶಾಖ್ ಮತ್ತಿತರರು ಇದ್ದರು.