ಮಡಿಕೇರಿ, ಫೆ. 13: ಪೊನ್ನಂಪೇಟೆಯ ಪ್ರಶಾಂತಿ ನಿಲಯದ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ದಾಖಲಾತಿಯಾದ 137 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ತಾ. 3 ರಿಂದ 6ರವರೆಗೆ ನಡೆದ ರಾಜ್ಯಮಟ್ಟದ ಮಿನಿ ಒಲಿಂಪಿಕ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ.
6 ವಿದ್ಯಾರ್ಥಿಗಳು ಚಿನ್ನದ ಪದಕ, 4 ವಿದ್ಯಾರ್ಥಿಗಳು ಬೆಳ್ಳಿ ಪದಕ, 3 ವಿದ್ಯಾರ್ಥಿಗಳು ಕಂಚಿನ ಪದಕವನ್ನು ಪಡೆದಿದ್ದು; ಬೆಸ್ಟ್ ಬಾಕ್ಸರ್ ಪ್ರಶಸ್ತಿಯನ್ನು 7ನೇ ತರಗತಿಯ ಎ.ಪಿ. ತಿಮ್ಮಯ್ಯ ಪ್ರಾಮಿಸಿಂಗ್ ಬಾಕ್ಸರ್ ಪ್ರಶಸ್ತಿಯನ್ನು 8ನೇ ತರಗತಿಯ ಮಂದಣ್ಣ ಯು.ಆರ್. ಇವರು ಪಡೆದಿದ್ದಾರೆ. ರಾಷ್ಟ್ರೀಯ ಪಂದ್ಯಾವಳಿ ಹರಿಯಾಣದಲ್ಲಿ ನಡೆಯಲಿದ್ದು; ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಈಗಾಗಲೇ 3 ವಿದ್ಯಾರ್ಥಿಗಳು ಭಾರತೀಯ ಸೈನ್ಯಕ್ಕೆ (ಎಂಇಜಿ) ಆಯ್ಕೆಯಾಗಿದ್ದಾರೆ.