ಮಡಿಕೇರಿ, ಫೆ.13: ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಆಯೋಜಿತ 2020-21 ನೇ ಸಾಲಿನ ಆಯ-ವ್ಯಯ ಮೇಲಿನ ಪೂರ್ವಭಾವಿ ಚರ್ಚೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಮುಖರು ಪಾಲ್ಗೊಂಡು ಕಾಫಿ ಬೆಳೆಗಾರರ ಸಮಸ್ಯೆಗೆ ಬಜೆಟ್ ನಲ್ಲಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್ ಮಂಡಿಸಿದ ಪ್ರಮುಖಾಂಶ ಈ ಕೆಳಗಿನಂತಿದೆ.10 ಅಶ್ವಶಕ್ತಿ ವಿದ್ಯುಚ್ಛಕ್ತಿ ಪಂಪ್ ಸೆಟ್ ಹೊಂದಿರುವ ಕಾಫಿ ಬೆಳೆಗಾರರನ್ನು ಎಲ್ ಟಿ4 ಸಿ ನಿಂದ ಎಲ್ ಟಿ.4 ಎ ಗೆ ಸೇರ್ಪಡೆಗೊಳಿಸಿ, ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕು. 10 ಹೆಚ್.ಪಿ. ವರೆಗಿನ ವಿದ್ಯುಚ್ಛಕ್ತಿ ಪಂಪ್ಸೆಟ್ ಬಳಕೆದಾರರ ಬಾಕಿ ಹಣವನ್ನು ಸಂಪೂರ್ಣವಾಗಿ (ಮೊದಲ ಪುಟದಿಂದ) ಮನ್ನಾ ಮಾಡಬೇಕು. 10 ಹೆಚ್.ಪಿಗೂ ಅಧಿಕ ವಿದ್ಯುಚ್ಛಕ್ತಿ ಪಂಪ್ಸೆಟ್ ಹೊಂದಿರುವ ಬೆಳೆಗಾರರಿಗೆ ಬಾಕಿಯನ್ನು ಬಡ್ಡಿರಹಿತವಾಗಿ ಕಂತುಗಳ ರೂಪದಲ್ಲಿ ಪಾವತಿಸಲು ಅನುಕೂಲ ಮಾಡಿಕೊಡಬೇಕು.ಅಲ್ಲಿಯವರೆಗೂ ವಿದ್ಯುತ್ ಸ್ಥಾವರದ ಮೂಲಕ ನೀರಾವರಿ ಮಾಡಲು ಯಾವುದೇ ಅಡಚಣೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಕೃತ, ವಾಣಿಜ್ಯ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ವಾರ್ಷಿಕ ಬಡ್ಡಿಯನ್ನು ಮನ್ನಾ ಮಾಡಬೇಕು. ಸಹಕಾರಿ ಸಂಸ್ಥೆಗಳಲ್ಲಿ ಸಕಾಲದಲ್ಲಿ ಸಾಲ ಪಾವತಿಸುವ ಪ್ರತೀ ಪಾವತಿದಾರರಿಗೆ ಅವರ ವಾರ್ಷಿಕ ಬಡ್ಡಿಯನ್ನು ಮನ್ನಾ ಮಾಡುವ ಹೊಸ ಯೋಜನೆ ಇದ್ದು; ಅದೇ ಸೌಲಭ್ಯವನ್ನು ಎಲ್ಲಾ ರೈತರಿಗೆ ಎಲ್ಲಾ ರಾಷ್ಟ್ರೀಕೃತ, ವಾಣಿಜ್ಯ ಮತ್ತು ಖಾಸಗಿ ಬ್ಯಾಂಕುಗಳಿಗೆ ವಿಸ್ತರಿಸಬೇಕು.
ಸರ್ಕಾರಿ ಭೂಮಿಯನ್ನು ಬೆಳೆಗಾರರಿಗೆ 2017-18 ರ ಬಜೆಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಲು ಘೋಷಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಭೂಮಿಯನ್ನು ನೀಡಬೇಕು. ಹಿಂದಿನ ಸರ್ಕಾರವು ಕೃಷಿ ಸಾಲ ಮನ್ನಾ ಘೋಷಿಸಿದೆ. ಆದರೆ ಅದು ಏಕರೂಪವಾಗಿಲ್ಲ. ಅನೇಕ ಷರತ್ತುಗಳನ್ನು ಮುಂದಿಡಲಾಗಿದೆ. ಆದ್ದರಿಂದ ಯಾವುದೇ ಷರತ್ತುಗಳಿಲ್ಲದೇ ಏಕರೂಪದ ಸಾಲಮನ್ನಾ ಸೌಲಭ್ಯವನ್ನು ರೈತನಿಗೆ ನೀಡಬೇಕು. 2018 ಮತ್ತು 2019 ನೇ ಸಾಲಿನಲ್ಲಿ ಸುರಿದ ಅತಿಯಾದ ಮಳೆಯಿಂದ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಫಿ ತೋಟಕ್ಕೆ ಸಮಸ್ಯೆಯಾಗಿ ಈ ಜಿಲ್ಲೆಗಳಲ್ಲಿ ಹಲವಾರು ಭೂಕುಸಿತಗಳು ಉಂಟಾಗಿದೆ. ಕಾಫಿ ತೋಟಗಳನ್ನು ಪುನಶ್ಚೇತನಗೊಳಿಸಲು ಮತ್ತು ನಷ್ಟವನ್ನು ಸರಿದೂಗಿಸಲು ಕಾಫಿ ಮಂಡಳಿಯು ಸೂಚಿಸಿದಂತೆ ಪರಿಹಾರವನ್ನು ಬೆಳೆಗಾರರಿಗೆ ಘೋಷಿಸಬೇಕು. ಸರ್ಕಾರ ಮತ್ತು ಎನ್.ಡಿ.ಆರ್.ಎಫ್ ನಿಂದ ಬೆಳೆಗಾರರಿಗೆ ನೀಡುವ ಪರಿಹಾರ ಏಕರೂಪವಾಗಿರುವುದಿಲ್ಲ. ಆದ್ದರಿಂದ ಎಲ್ಲಾ ಬೆಳೆಗಾರರಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡಬೇಕು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ದೊರಕಬೇಕು.
ಸಹಕಾರಿ ಸಂಸ್ಥೆಗೆ ಹೆಚ್ಚು ಒತ್ತು ನೀಡುವುದು. ಕೋಮಾರ್ಕ್ ಸಂಸ್ಥೆಗೆ 20 ಕೋಟಿ ರೂ. ಗಳ ಅಗತ್ಯವಾದ ಹಣಕಾಸನ್ನು ಒದಗಿಸಿಕೊಟ್ಟು ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿಗೆ ಉತ್ತಮ ದರ ಸಿಗುವಂತೆ ಮಾಡಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು. ರೈತರ ಪರವಾಗಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಈ ಸಭೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಎಸ್.ಬಕ್ಕರವಳ್ಳಿ, ಉಪಾಧ್ಯಕ್ಷ ಎನ್.ಬಿ.ಉದಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಹೆಚ್.ಹೆಚ್.ಉದಯ್, ಕೋಮಾರ್ಕ್ನ ಮಾಜಿ ಅಧ್ಯಕ್ಷ ಡಿ.ಎಸ್.ರಘು ಪಾಲ್ಗೊಂಡಿದ್ದರು.