ವೀರಾಜಪೇಟೆ, ಫೆ. 13: ಕೆಲವು ಸರ್ಪಗಳು ಕಾಣದೊರಕುವುದು ಅತಿ ಅಪರೂಪ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಅಕ್ರಮವಾಗಿ ಹಿಡಿದು ಮಾರಾಟ ಮಾಡುವುದು ಕಾನೂನು ಬಾಹಿರವೆಂದು ತಿಳಿದಿದ್ದರೂ ಕಳ್ಳತನ ಮಾರ್ಗದಿಂದ ಹಣಮಾಡುವವರು ಕಾನೂನು ಹಿಡಿತದಿಂದ ತಪ್ಪಿಸಿಕೊಳ್ಳಲು ಕಷ್ಟ. ಇದಕ್ಕೆ ಸಾಕ್ಷಿಯಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಯಾಂಡ್ ಬೋವಾ ಹಾವನ್ನು ಆಂಧ್ರ ರಾಜ್ಯದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ತಿತಿಮತಿಯ ಚನ್ನಂಗೊಲ್ಲಿಯಲ್ಲಿ ಕಾರನ್ನು ತಪಾಸಣೆ ನಡೆಸಿದ ತಾಲೂಕು ಸಿ.ಐ.ಡಿ. ಅರಣ್ಯ ದಳದ ಸಂಚಾರಿ ಪೊಲೀಸರು ಹಾವು, ಕಾರನ್ನು ವಶಪಡಿಸಿಕೊಂಡು ಆಂಧ್ರ ಪ್ರದೇಶ ರಾಜ್ಯದ ಐದು ಮಂದಿಯನ್ನು ಬಂಧಿಸಿದ್ದಾರೆ. ಪೊನ್ನಂಪೇಟೆ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ ಮೇರೆ ಎಲ್ಲರನ್ನೂ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾ ಧೀಶರು ಆದೇಶಿಸಿದ್ದಾರೆ.ನಿನ್ನೆ ದಿನ ಸಂಜೆ 6-30ಗಂಟೆಗೆ ಆಂಧ್ರದಿಂದ ಕೇರಳ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಡಿಸಾಯರ್ ಅನ್ನು (ಎ.ಪಿ.20-ಎ.ವಿ.7821) ಸಿ.ಐ.ಡಿ ಅರಣ್ಯ ಸಂಚಾರಿ ದಳದ ಪೊಲೀಸರು ಶೋಧಿಸಿದಾಗ ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಬಿಳಿ ಮಿಶ್ರಿತ ಕಪ್ಪು ಬಣ್ಣದ ಹಾವು ಪತ್ತೆಯಾಗಿದೆ. ಕಾರಿನಲ್ಲಿದ್ದ ಮುಲ್ಲಾ ಮೆಹಬೂಬ್ ವಲಿ, ಶೇಕ್ ಮುಲ್ಲಾ ಚಾಂದ್ ಪಾಶ, ಎಸ್.ಫಯಾಜ್, ಬೋಯಿ ರಂಗಸ್ವಾಮಿ, ಶೇಕ್ ಮೆಹಬೂಬ್ ಪಾಶ ಎಂಬ ಐವರನ್ನು ಬಂಧಿಸಿದ್ದಾರೆ.

ಮಡಿಕೇರಿ ಅರಣ್ಯ ಸಂಚಾರಿ ಘಟಕದ (ಮೊದಲ ಪುಟದಿಂದ) ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಎಂ.ಬಿ.ಗಣೇಶ್ ಪಿ.ಬಿ.ಮೊಣ್ಣಪ್ಪ ಹಾಗೂ ಸಿ.ಎಂ.ರೇವಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸಿ.ಐ.ಡಿ ಅರಣ್ಯ ಸಂಚಾರಿ ದಳ ಪೊಲೀಸರಿಗೆ ದೊರೆತ ಸುಳಿವಿನಂತೆ ಸೂಕ್ತ ಸಮಯದಲ್ಲಿ ತಿತಿಮತಿಯ ಚನ್ನಂಗೊಲ್ಲಿಯಲ್ಲಿ ಕಾರನ್ನು ತಪಾಸಣೆಗೊಳಪಡಿಸಿದಾಗ ಹಾವು ಪತ್ತೆಯಾಯಿತು. ಇಲಾಖೆಯ ಪ್ರಕಾರ ಈ ಹಾವಿಗೆ ಅಂತರರಾಜ್ಯ ಮಾರುಕಟ್ಟೆಯಲ್ಲಿ ಲಕ್ಷಾಂತರ ಮೌಲ್ಯವಿದೆ ಎಂದು ಹೇಳಲಾಗಿದ್ದು ಆರೋಪಿಗಳು ಬೆಂಗಳೂರಿನಲ್ಲಿ ಈ ಹಾವನ್ನು ಖರೀದಿಸುವ ಗಿರಾಕಿಯನ್ನು ಗೊತ್ತುಪಡಿಸಿದ ನಂತರ ಹಾವನ್ನು ಆಂಧ್ರದಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದರೆಂದು ಇಲಾಖೆಯ ತನಿಖೆಯಿಂದ ಗೊತ್ತಾಗಿದೆ.

ಮೂಲಗಳ ಪ್ರಕಾರ ಈ ಹಾವನ್ನು ಮನೆಯಲ್ಲಿ ಸಾಕುವುದರಿಂದ ಸಂಪತ್ತು ದುಪ್ಪಟ್ಟುಗೊಳ್ಳುವ ನಂಬಿಕೆಯಿಂದ ಹಾವನ್ನು ದುಬಾರಿ ಬೆಲೆಗೆ ಶ್ರೀಮಂತ ವರ್ಗವೇ ಖರೀದಿಸುವುದಾಗಿ ತಿಳಿದು ಬಂದಿದೆ.

ಹಾವಿನ ಬಾಲವು ತಲೆಯನ್ನು ಹೊಂದುವ ಹಾಗೆ ಮೊಂಡಾಗಿರುತ್ತದೆ. ಇದರಿಂದಾಗಿ 2 ತಲೆಗಳು ಇರುವ ಹಾಗೆ ಕಾಣುತ್ತದೆ.

-ಕೆ.ಕೆ.ಎಸ್, ಡಿ.ಎಂ.ಆರ್, ದಿನೇಶ್ ಎನ್.ಎನ್