ಮಡಿಕೇರಿ: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭೋತ್ಸವ ಕಾರ್ಯಕ್ರಮವು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶಿವಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳಲ್ಲಿ ಶಿಸ್ತು ಇರಬೇಕು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಯಾಗಬೇಕು ಎಂದು ಹೇಳುತ್ತಾ ಮಕ್ಕಳಿಗೆ ನೀತಿ ಕಥೆಯನ್ನು ಹೇಳಿ ಪರಿಶ್ರಮದ ಬೆಲೆ ಬಗ್ಗೆ ವಿವರಿಸಿದರು.
ಶಾಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು ಎಂದರು. ಈ ಸಂದರ್ಭ ಶಾಲೆಗೆ ಅನೇಕ ಸಂದರ್ಭಗಳಲ್ಲಿ ದಾನಿಗಳಾಗಿ ಸಹಕರಿಸಿದ ಸ್ವಾಗತ್ ಡೆಕೋರೇಟರ್ಸ್‍ನ ಮಾಲೀಕ ಅಜ್ಜೆಟ್ಟಿರ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯ ಶಿವರಾಂ ಸ್ವಾಗತಿಸಿದರು. ತೇಜಸ್ವಿನಿ ವರದಿ ವಾಚಿಸಿದರು, ರೇವತಿ ರಮೇಶ್ ನಿರೂಪಿಸಿದರು. ಮಕ್ಕಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಕ್ಯಾಥರೀನ್, ಸಂದೇಶ್, ಜಾನಕಿ, ವತ್ಸಲರವರು ನಡೆಸಿಕೊಟ್ಟರು. ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಪೋಷಕರು ಹಾಜರಿದ್ದರು.
ಕರಿಕೆ: ಇಲ್ಲಿಗೆ ಸಮೀಪದ ಎಳ್ಳುಕೊಚ್ಚಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಿಕೆಯ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಎಸ್.ಡಿ.ಎಂ.ಸಿ. ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ ಜರುಗಿತು.
ಕಾರ್ಯಾಗಾರವನ್ನು ಕರಿಕೆ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪುಷ್ಪಾವತಿ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಎಸ್.ಡಿ.ಎಂ.ಸಿ. ಸದಸ್ಯರುಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ರಂಜಿತ್ ಮಾಹಿತಿ ನೀಡಿದರು.
ಈ ಸಂದರ್ಭ ಮಡಿಕೇರಿ ಬಿ.ಆರ್.ಸಿ. ಕೇಂದ್ರದ ಕೆ.ಎಂ. ಲೋಕಪ್ರಭು, ಮುಖ್ಯ ಶಿಕ್ಷಕಿ ಕುಸುಮಾವತಿ, ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ಪ, ಮುಖ್ಯ ಶಿಕ್ಷಕ ಮನೋಹರ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕುಮಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಚೆಟ್ಟಳ್ಳಿ: ನೆಲ್ಲಿಹುದಿಕೇರಿ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ವರ್ಣರಂಜಿತ ಉಡುಪುಗಳನ್ನು ತೊಟ್ಟು ಎಲ್ಲರ ಗಮನ ಸೆಳೆದರು.
ವಿದ್ಯಾರ್ಥಿಗಳು ವಿವಿಧ ಮನೋರಂಜನಾ ಕ್ರೀಡೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರ ಸೇವಾ ಮನೋಭಾವನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸಕ್ತ ಸಾಲಿನಲ್ಲಿ ಕಾಲೇಜಿಗೆ ಉತ್ತಮ ಅಂಕಗಳೊಂದಿಗೆ ಶೇ. 100 ರಷ್ಟು ಫಲಿತಾಂಶ ತಂದುಕೊಡುವ ಭರವಸೆಯನ್ನು ವಿದ್ಯಾರ್ಥಿಗಳು ನೀಡಿದರು. ಕಾಲೇಜಿನ ಕಿರಿಯ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಸ್ತನ್ನು ಪಾಲಿಸಿಕೊಂಡು ಹೋಗುವಂತೆ ಕಿವಿಮಾತು ಹೇಳಿದರು.
ದ್ವಿತೀಯ ಪಿಯುಸಿ ನಿರ್ಗಮಿತ ವಿದ್ಯಾರ್ಥಿಗಳು ಕಾಲೇಜಿನ ಸಭಾಂಗಣಕ್ಕೆ ಮೂರು ಸೀಲಿಂಗ್ ಫ್ಯಾನ್‍ಗಳನ್ನು ನೀಡಿದರು. ಈ ಸಂದರ್ಭ ಕಾಲೇಜಿನಿಂದ ವರ್ಗಾವಣೆಯಾಗಿದ್ದ, ಇತಿಹಾಸ ಉಪನ್ಯಾಸಕ ವಸಂತ್ ಕುಮಾರ್ ಅವರಿಗೂ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಜಸ್ಟಿನ್ ಕೊರೆಯ, ಉಪನ್ಯಾಸಕರಾದ ಲೋಕೇಶ್, ಭಾಗ್ಯಜ್ಯೋತಿ, ವಿಶ್ವನಾಥ್, ಕೃಷ್ಣ, ಶಶಿಕುಮಾರ್, ತುಳಸಿ, ಇಸ್ಮಾಯಿಲ್, ಧನಂಜಯ್ ಇದ್ದರು.
ಶನಿವಾರಸಂತೆ: ರಕ್ತದಾನ ಮಾಡುವುದರಿಂದ ಹಲವು ಕಾಯಿಲೆಗಳು ನಿವಾರಣೆಯಾಗುವುದರ ಜೊತೆಯಲ್ಲಿ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಬೆಂಗಳೂರು ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಂಚಾಲಕ ಡಾ. ಎನ್. ಈಶ್ವರ್ ಅಭಿಪ್ರಾಯಪಟ್ಟರು.
ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜು, ಯುವ ರೆಡ್‍ಕ್ರಾಸ್ ಘಟಕ, ಲಯನ್ಸ್ ಕ್ಲಬ್ ಆಫ್ ಹುಣಸೂರು, ಕಾವೇರಿ ಸಂಭ್ರಮ ಮತ್ತು ಬೆಂಗಳೂರು ರಾಷ್ಟ್ರೋತ್ಥಾನ ರಕ್ತ ಕೇಂದ್ರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಭಾರತಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಹೆಚ್.ಪಿ. ಶೇಷಾದ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ತದಾನದಿಂದ ಜೀವ ಉಳಿಸಿನ ಧನ್ಯತಾ ಭಾವನೆ ಮೂಡುತ್ತದೆ ಎಂದರು. ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆ ವಹಿಸಿ ಸಾರ್ವಜನಿಕರು, ವಿದ್ಯಾರ್ಥಿಗಳು ರಕ್ತದಾನ ಮಾಡಲು ಮುಂದೆ ಬರುವಂತೆ ಮನವಿ ಮಾಡಿದರು.
ಶನಿವಾರಸಂತೆ ಲಯನ್ಸ್ ಕ್ಲಬ್‍ನ ಬಿ.ಕೆ. ಚಿಣ್ಣಪ್ಪ, ಲಯನ್ಸ್ ಕ್ಲಬ್ ಆಫ್ ಹುಣಸೂರು ಕಾವೇರಿ ಸಂಭ್ರಮದ ಪ್ರಮುಖರಾದ ನಾರಾಯಣ ಸ್ವಾಮಿ, ಧರ್ಮಪ್ಪ, ಎನ್.ಕೆ. ಅಪ್ಪಸ್ವಾಮಿ, ವಿದ್ಯಾಸಂಸ್ಥೆ ಪ್ರಾಂಶುಪಾಲ ದಯಾನಂದ್ ಮುಂತಾದವರು ಇದ್ದರು. ಶಿಬಿರದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ 100 ಕ್ಕಿಂತ ಹೆಚ್ಚು ಮಂದಿ ರಕ್ತದಾನ ಮಾಡಿದರು.ಭಾಗಮಂಡಲ: ವಿದ್ಯಾರ್ಥಿ ಜೀವನದಲ್ಲಿ ಮಹಾನ್ ಗ್ರಂಥಗಳನ್ನು ಅಭ್ಯಸಿಸಿದರೆ ಮತ್ತಷ್ಟು ಜ್ಞಾನಾರ್ಜನೆಯೊಂದಿಗೆ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯ ಎಂದು ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹೇಳಿದರು.
ಭಾಗಮಂಡಲ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ದತ್ತಿನಿಧಿ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ವರು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಹೇಳಿದರು. ಅಧ್ಯಕ್ಷತೆಯನ್ನು ನಿರ್ದೇಶಕ ನಾರಾಯಣಾಚಾರ್ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ನಿರ್ದೆಶಕ ರವಿ ಹೆಬ್ಬಾರ್, ಪ್ರಾಂಶುಪಾಲೆ ಜಾನಕಿ ಮೋಹನ್, ಉಪನ್ಯಾಸಕರಾದ ದಿವಾಕರ್, ಅವಿನಾಶ್ ಉಪಸ್ಥಿತರಿದ್ದರು. ಉಪನ್ಯಾಸಕ ಹೇಮಂತ್ ಸ್ವಾಗತಿಸಿ, ಸುರೇಂದ್ರ ನಿರೂಪಿಸಿ, ಲೋಕನಾಥ್ ವಂದಿಸಿದರು.
ಹೆಬ್ಬಾಲೆ: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶಾಲಾ ಶಿಕ್ಷಕಿ ಬಬಿತಾ ಪ್ರಸನ್ನಕುಮಾರ್ ಉಚಿತವಾಗಿ ರಾಷ್ಟ್ರ ನಾಯಕರ ಫೋಟೋವನ್ನು ನೀಡಿದರು. ಹೆಚ್.ಎಂ. ವೆಂಕಟೇಶ್ ಪಡೆದುಕೊಂಡರು.
ಈ ಸಂದರ್ಭ ಕ್ಲಷ್ಟರ್ ಸಿ.ಆರ್.ಪಿ. ಗಿರೀಶ್ ಮತ್ತು ಶಿಕ್ಷಕಿಯರಾದ ಮೀನಾಕ್ಷಿ, ಜಾನಕಿ, ರಮೇಶ್, ಪುಷ್ಪಾವತಿ, ನೀಲಾಂಬಿಕೆ, ತರಬೇತಿ ಶಿಕ್ಷಕಿಂiÀiರು ಹಾಜರಿದ್ದರು.
ಮದೆ ಮಹೇಶ್ವರ ಕಾಲೇಜು: ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯಾಧ್ಯಕ್ಷ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಮಡಿಕೇರಿ ತಾಲೂಕು ಉಪವಿಭಾಗಾಧಿಕಾರಿ ಜವರೇಗೌಡ ಮಾತನಾಡಿದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಹುದೇರಿ ರಾಜೇಂದ್ರ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆಯ ಬಗ್ಗೆ ತಿಳಿಸಿದರು. ಆಡಳಿತ ಮಂಡಳಿಯ ನಿರ್ದೇಶಕ ಆರ್. ಜೋಯಪ್ಪ, ಪ್ರಾಂಶುಪಾಲೆ ಗುಲಾಬಿ ಜನಾರ್ಧನ್, ಮುಖ್ಯೋಪಾಧ್ಯಾಯ ಬಿ.ಎಸ್. ಗಣಪತಿ ಹಾಗೂ ಉಪನ್ಯಾಸಕರು ಮತ್ತು ಪೋಷಕರು ಪಾಲ್ಗೊಂಡಿದ್ದರು.
ಶನಿವಾರಸಂತೆ: ಪಟ್ಟಣದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶನಿವಾರಸಂತೆ-ಕೊಡ್ಲಿಪೇಟೆ ಹೋಬಳಿಗಳ ಪ್ರೌಢಶಾಲಾ 10ನೇ ವಿದ್ಯಾರ್ಥಿಗಳಿಗೆ ನಡೆದ ಪ್ರೇರಣಾ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಪಿ. ಪುಟ್ಟರಾಜ್ ಉದ್ಘಾಟಿಸಿದರು.
ಬೆಂಗಳೂರಿನ ವ್ಯಕ್ತಿತ್ವ ವಿಕಸನ ತರಬೇತುದಾರ ತಿರುಮಲೇಶ್ ಪರೀಕ್ಷೆ ಎದುರಿಸುವ ಹಾಗೂ ಉತ್ತಮ ಅಂಕಗಳನ್ನು ಪಡೆಯುವ ಬಗ್ಗೆ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಮಾತನಾಡಿ, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಗಂಭೀರವಾಗಿ ಪರಿಗಣಿಸುವ ವಿದ್ಯಾರ್ಥಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತಾನೆ ಎಂದು ಕಿವಿಮಾತು ಹೇಳಿದರು.
ವಿದ್ಯಾಸಂಸ್ಥೆಯ ಫಾದರ್ ಥೋಮಸ್ ಅಯ್ಯನ್ ಕುಡಿ, ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಇಸಿಒ ಶೇಖರ್, ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್, ಜಾನ್‍ಪಾಲ್ ಡಿಸೋಜ, ಜಯಕುಮಾರ್ ಉಪಸ್ಥಿತರಿದ್ದರು.