ಕೊಡಗಿನ ಅತ್ಯಂತ ಎತ್ತರವಾದ ಬೆಟ್ಟ ಹಾಗೂ ಕರ್ನಾಟಕದಲ್ಲೇ ಅತಿ ಎತ್ತರದಲ್ಲಿ ಮೂರನೇಯದಾಗಿರುವ ಬೆಟ್ಟ ತಡಿಯಂಡ ಮೋಳ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5,6,7ನೇ ತರಗತಿಯ 36 ಮಕ್ಕಳ ತಂಡ “ಇಕೋ ಕ್ಲಬ್” ವತಿಯಿಂದ ಪರಿಸರ ವೀಕ್ಷಣೆಗಾಗಿ ತಡಿಯಂಡಮೋಳ್ ಬೆಟ್ಟವನ್ನು ಏರಿದರು.
ಇದು ಸಮುದ್ರ ಮಟ್ಟದಿಂದ 1748 ಮೀಟರ್ ಎತ್ತರದಲ್ಲಿದೆ. ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮಪಂಚಾಯಿತಿಗೆ ಒಳಪಡುವ ಯವಕಪಾಡಿ ಗ್ರಾಮದಲ್ಲಿ ಈ ಬೆಟ್ಟವಿದೆ. ಇದರ ತಪ್ಪಲಿನಲ್ಲಿ ನಾಲ್ಕುನಾಡು ಅರಮನೆ ಇದೆ. ಅಲ್ಲಿಂದ ಸುಮಾರು 7000 ಮೀಟರ್ ಎತ್ತರ ಇರುವ ಈ ಬೆಟ್ಟಕ್ಕೆ 200 ಮೀಟರಿನಷ್ಟು ಸಿಮೆಂಟ್ ರೋಡ್ ಅಳವಡಿಸಲಾಗಿದೆ. ಕಾಮಗಾರಿ ಕೆಲಸ ನಡೆಯುತ್ತಿರುವುದರಿಂದ ನಾವು ಬೆಟ್ಟವನ್ನು ನಡೆದೇ ಸಾಗಿದೆವು. ಬೆಟ್ಟದ ಅರ್ಧಭಾಗದಷ್ಟು ಎತ್ತರದಲ್ಲಿ ಕುಡಿಯ ಜನಾಂಗದ ಮೂಲನಿವಾಸಿಗಳಿದ್ದಾರೆ. ಅವರು ದೂರದ ಪಟ್ಟಣ, ಶಾಲೆಗಳಿಗೆ ಮಕ್ಕಳು ನಡೆದೇ ಸಾಗುತ್ತಾರೆ. ಎರಡು ಮೂರು ಕಿಲೋ ಮೀಟರ್ ಜೀಪಿನಲ್ಲಿ ಸಾಗಲು 300 ರಿಂದ 350 ರೂಪಾಯಿಗಳನ್ನು ಕೊಡಬೇಕೆಂದು ಅಲ್ಲಿನವರು ಹೇಳುತ್ತಾರೆ. ಅಲ್ಲಿಯ ಜನರ ಬದುಕು ಸಾಹಸಮಯವಾದದ್ದು.
ಬೆಟ್ಟದ ತಪ್ಪಲಿನಲ್ಲಿರುವ ಅರಮನೆಯನ್ನು 1792ರಲ್ಲಿ ದೊಡ್ಡರಾಜೇಂದ್ರನು ತನ್ನ ಕುಟುಂಬದವರನ್ನು ಶತ್ರುಗಳಿಂದ ಸುರಕ್ಷಿತವಾಗಿಡಲು ಕಟ್ಟಿಸಿದನೆಂದು ಇತಿಹಾಸದಲ್ಲಿ ದಾಖಲೆಯಿದೆ. ಚಿಕ್ಕದೇವರಾಯನು ಬ್ರಿಟಿಷರಿಗೆ ಶರಣಾಗುವ ಮೊದಲು ಇಲ್ಲಿ ಗೌಪ್ಯವಾಗಿ ಇದ್ದನಂತೆ. ಮುಂದೆ 1834ರಲ್ಲಿ ಬ್ರಿಟಿಷರಿಂದ ಬಂದಿಸಲ್ಪಟ್ಟನು. ಈ ಅರಮನೆಯು 4 ಅಡಿ ಎತ್ತರದ ವೇದಿಕೆಯ ಮೇಲೆ ನಿಂತಿದೆ. ಎರಡು ಅಂತಸ್ಥಿನ ಮನೆಯಾಗಿದ್ದು ಚಿತ್ತಾಕರ್ಷಣೆಯಿಂದ ಕೂಡಿದೆ. ನಮ್ಮ ಕೊಡಗಿನ ಐನ್‍ಮನೆಗಳು ಇದೇ ಮಾದರಿಯನ್ನು ಹೋಲುತ್ತವೆ. ಮರದ ಕಂಬಗಳು, ಬಾಗಿಲುಗಳು, ಪಡಸಾಲೆ, ದರ್ಬಾರ್ ಹಾಲ್, ಬಚ್ಚಲು ಮನೆ, ದರ್ಬಾರ್ ಹಾಲಿನಲ್ಲಿ ಕೆತ್ತಿದ ಭುವನೇಶ್ವರಿಯಲ್ಲಿ ಅರಳಿದ ಕಮಲದ ಕೆತ್ತನೆ, ಅರಮನೆಯ ಅಂಬಾರಿ, ನವರಾತ್ರಿಯ ಉತ್ಸವ ಸೈನಿಕರ ಸಾಲು, ರಾಣಿಯರ ಹಾಗೂ ಪ್ರಾಣಿಗಳ ಚಿತ್ರ ಇತಿಹಾಸವನ್ನು ನೆನಪಿಗೆ ತರುತ್ತದೆ. ಮಹಡಿಯನ್ನು ಏರಿ ಹಿಂಭಾಗದ ಕಿರಿದಾದ ಓಣಿಯಂತಹ ಜಾಗದಲ್ಲಿ ಸಾಗಿದರೆ ಬಲಭಾಗದ ಮೂಲೆಯಲ್ಲಿ ಕೆಳಕ್ಕೆ ಇಳಿಯಲು ಮರದ ಏಣಿ ಇದೆ. ಕಡಿದಾಗಿದ್ದು ಇಳಿಯುವ ದಿಕ್ಕಿಗೆ ವಿರುದ್ಧವಾಗಿ ಮೆಟ್ಟಿಲು ಇರುವುದು. ಎಚ್ಚರ ತಪ್ಪಿ ಇಳಿದರೆ ಕೆಳಕ್ಕೆ ಬಿದ್ದು ಕೈಕಾಲು ಮುರಿದುಕೊಳ್ಳಬೇಕಾದೀತು. ಇದು ಶತ್ರುಗಳಿಂದ ತಪ್ಪಿಸಿಕೊಳ್ಳುವ ಒಂದು ತಂತ್ರಗಾರಿಕೆಯಾಗಿರಬೇಕು.
ಅರಮನೆಯ ಮುಂಭಾಗ ಎಡಭಾಗದಲ್ಲಿ ವೀರರಾಜೇಂದ್ರ ಮತ್ತು ಮಹದೇವಮ್ಮಾಜಿಯವರ ವಿವಾಹ ನಡೆದ ಕಲ್ಯಾಣ ಮಂಟಪವಿದೆ. ಅರಮನೆಯ ಮುಂಭಾಗ ಪ್ರಮುಖ ದ್ವಾರದ ಕಾಂಪೌಂಡ್ ಕುಸಿದಿದೆ. ಯಾವುದೇ ಪ್ರಾಕೃತಿಕ ವಿಕೋಪಕ್ಕೆ ಕುಂದದೆ ತನ್ನ ಹಳೆಯ ಗಾಂಭೀರ್ಯತೆಯಿಂದ ನಿಂತಿರುವ ಈ ಅರಮನೆಗೆ ಹೊಸ ಕಾಯಕಲ್ಪದ ಅವಶ್ಯಕತೆಯಿದೆ. ಅರಮನೆಯ ಸುತ್ತಲು ಕಾಪಳ ಜನಾಂಗದವರು ವಾಸಿಸುತ್ತಿದ್ದಾರೆ. ಇವರು ರಾಜರ ಕಾಲದ ಅರಮನೆಯ ಕಾವಲುಗಾರರು. ಇವರು ಈಗ ಕೃಷಿ ಕೂಲಿ ಕಾರ್ಮಿಕರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಬೆಟ್ಟದ ತಪ್ಪಲಿನಿಂದ ಸುಮಾರು 7 ಕಿ ಮೀ ದೂರದ ಹಾದಿಯನ್ನು ಮಕ್ಕಳೊಂದಿಗೆ ನಾನು ಸೇರಿದಂತೆ ಇಬ್ಬರು ಶಿಕ್ಷಕಿಯರು ಕಾಲು ನಡಿಗೆಯಿಂದ ಸಾಗಲಾರಂಬಿಸಿದೆವು. ದಾರಿಯ ಎರಡೂ ಬದಿಯಲ್ಲಿರುವ ಕಾಡಿನ ಮರಗಳ, ಗಿಡಬಳ್ಳಿಗಳ, ಹಣ್ಣಿನ ಮರಗಿಡಗಳ ಪರಿಚಯ ಮಾಡುತ್ತಾ ನಡೆದೆವು. ದಾರಿಯಲ್ಲಿ ನಮಗೆ ಕುಡಿಯರ ಮುತ್ತಪ್ಪನವರು ಎದುರಾದರು. ಅವರು ನಮ್ಮನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ಅವರ ಬಗ್ಗೆ ನನಗೆ ಹಿಂದಿನಿಂದಲೂ ಗೊತ್ತಿತ್ತು. ಸಾಕ್ಷಾರ ಕಾವೇರಿಯಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ಹಲವು ಸಾಮಾಜಿಕ ಹಾಡುಗಳನ್ನು ರಚಿಸಿದ್ದಾರೆ. ಆನೆಯೊಂದು ದಾರಿಯ ಪಕ್ಕದಲ್ಲಿಯೇ ಇದೆ. ಎಚ್ಚರಿಕೆಯಿಂದ ಮುಂದೆ ಸಾಗಿ ಎಂದು ಸಲಹೆಯನ್ನು ನೀಡಿದರು. ಮುಂದೆ ದಾರಿಯಲ್ಲಿ ಅರಣ್ಯ ಇಲಾಖೆಯವರು ಸಿಕ್ಕಿದರು. ಅವರು ನಮಗೆ ಸಹಾಯಕ್ಕಾಗಿ ಮತ್ತು ಮಾರ್ಗದರ್ಶನಕ್ಕಾಗಿ ಅಲ್ಲಿನ ವನಪಲಕರಾದ ಕುಡಿಯರ ತಮ್ಮಯ್ಯನವರನ್ನು ನಮ್ಮೊಂದಿಗೆ ನಿಯೋಜಿಸಿದರು. ಅವರೊಂದಿಗೆ ನಾವು ಧೈರ್ಯದಿಂದ ಮುಂದೆ ಸಾಗಿದೆವು. ದಾರಿಯ ಉದ್ದಕ್ಕೂ ಆನೆ ನಡೆದ ಹೆಜ್ಜೆಯ ಗುರುತು ಇತ್ತು. ಅಲ್ಲೇ ಮುಂದೆ ವೀವ್ ಪಾಯಿಂಟಲ್ಲಿ ಇದ್ದ ರೆಸಾಲ್ಟ್‍ನ ತಂತಿ ಬೇಲಿ ಹಾಗೂ ಅದರ ಗೇಟನ್ನು ಆನೆ ಮುರಿದಿರುವ ದೃಶ್ಯವನ್ನು ನೋಡಿ ಆನಂದಿಸಿ ಮುಂದೆ ಸಾಗಿದೆವು.
(ಮುಂದುವರಿಯುವದು)
-ತೆಕ್ಕಡೆ ಬಿ ಕುಮಾರಸ್ವಾಮಿ,
ಶಿಕ್ಷಕರು ವಾಟೆಕಾಡು