ಮಡಿಕೇರಿ, ಫೆ. 12: ಸಹಸ್ರಮಾನದ ಇತಿಹಾಸದೊಂದಿಗೆ ಪೂಜೆಗೊಳ್ಳುತ್ತಾ; ಕೆಲವು ಶತಮಾನ ದಿಂದ ದೇಗುಲದ ಅಳಿವಿನೊಂದಿಗೆ ಕಾಡುಪಾಲಾಗಿದ್ದ; ತಾಳತ್ಮನೆಯ ಶ್ರೀ ಕುಂದೂರುಕೇರಿ ದುರ್ಗಾ ಭಗವತಿಯು ಇಂದು ಮತ್ತೆ ನೂತನ ದೇವಾಲಯದಲ್ಲಿ ವಿರಾಜಮಾನ ಗೊಂಡು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ಕೊಂಡಳು. ಈ ನಿಮಿತ್ತ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ತಾ. 7 ರಂದು ಧಾರ್ಮಿಕ ಕೈಂಕರ್ಯಗಳು ಆರಂಭಗೊಳ್ಳು ವದರೊಂದಿಗೆ; ಇಂದು ಬೆಳಿಗ್ಗೆ 8.44 ಗಂಟೆಗೆ ಶುಭ ಮೀನಲಗ್ನ ಮುಹೂರ್ತದಲ್ಲಿ ಪ್ರತಿಷ್ಠಾಪನೆ ಬಳಿಕ ಬ್ರಹ್ಮಕಲಶೋತ್ಸವ ನೆರವೇರಿತು.ಅಲ್ಲದೆ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ, ನಾಗದೇವತೆ, ಪರಿವಾರ ದೈವಗಳಾದ ಗುಳಿಗ ಹಾಗೂ ಚಾಮುಂಡಿಗೆ ಪ್ರತ್ಯೇಕವಾಗಿ ನೆಲೆ ಕಲ್ಪಿಸಲಾಯಿತು. ಆ ಮುನ್ನ ಉಷಾಃಕಾಲದಿಂದ ದೇವರ ಸನ್ನಿಧಿಯಲ್ಲಿ 108 ಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಗೋಪೂಜೆ, ತುಳಸಿಪೂಜೆ ಮುಂತಾದ ಕೈಂಕ ರ್ಯಗಳನ್ನು ನೆರವೇರಿಸಲಾಯಿತು.(ಮೊದಲ ಪುಟದಿಂದ) ಶುಭ ಮುಹೂರ್ತದಲ್ಲಿ ಶ್ರೀ ದುರ್ಗಾಭಗವತಿ ಹಾಗೂ ಗಣಪತಿ ಸಹಿತ ಪರಿವಾರ ದೈವಗಳ ಮರು ಪ್ರತಿಷ್ಠಾಪನೆ ಬಳಿಕ; ದೇವಾಲಯಕ್ಕೆ ಕಲಶಗೋಪುರ ಸ್ಥಾಪಿಸಿ ಕುಂಭಾಭಿಷೇಕ ಶಾಸ್ತ್ರೋಕ್ತವಾಗಿ ನಡೆಯಿತು. ಅಂತೆಯೇ ಶ್ರೀ ದೇವಿಗೆ ಒಂದು ಸಾವಿರದ ಎಂಟು ಕಲಶಾಭಿಷೇಕ, 108 ಎಳನೀರು ಅಭಿಷೇಕ, ಅಷ್ಟದ್ರವ್ಯ ಸೇವೆ ಸಹಿತ ಪಂಚಾಮೃತಾಭಿಷೇಕ ನೆರವೇರಿತು. ಅನಂತರ ವಿಶೇಷ ಅಲಂಕಾರದೊಂದಿಗೆ ಮಹಾಪೂಜೆ ಕೈಗೊಳ್ಳಲಾಯಿತು.ಆಶೀರ್ವಚನ : ದೇವ ಸನ್ನಿಧಿಯಲ್ಲಿ ಆರು ದಿನಗಳಿಂದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಂಡು ಬಂದಿರುವ ಕುಂಟಾರು ರವೀಶ್ ತಂತ್ರಿಗಳು; ಕ್ಷೇತ್ರಪಾಲ ಹಾಗೂ ಅಷ್ಟ ದಿಕ್ಪಾಲಕರಿಗೆ ಧಾರ್ಮಿಕ ಕಾರ್ಯ ಪೂರೈಸಿ, ಕ್ಷೇತ್ರ ಶುದ್ಧಿ ಸಹಿತ ಕುಂಭಾಭಿಷೇಕ ನಡೆಸಿ ನೆರೆದಿದ್ದ ಸದ್ಭಕ್ತರಿಗೆ ಸಂಪ್ರೋಕ್ಷಣೆ ಯೊಂದಿಗೆ; ಬ್ರಾಹ್ಮಣ ಉಪಾಸನೆ; ಆಶೀರ್ವಚನ ನಿರ್ವಹಿಸಿದರು.
ದೀಪ ಆರದಿರಲಿ : ಶ್ರೀ ದುರ್ಗಾಭಗವತಿ ಹಾಗೂ ಪರಿವಾರ ದೈವಗಳು ನೂತನ ದೇವಾಲಯ ಪರಿಸರದಲ್ಲಿ ವಿರಾಜಮಾನಗೊಂಡ ಬಗ್ಗೆ ಉಲ್ಲೇಖಿಸಿದ ಅವರು; ದೈವಜ್ಞರುಗಳ ಸಹಿತ ತಂತ್ರಿಗಳು ನಿರ್ವಹಿಸುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಹಾಗೂ ಪೂಜಾ ವಿಧಿಗಳನ್ನು ಗ್ರಾಮಸ್ಥರು ಮುಂದುವರೆಸಿಕೊಂಡು ಹೋಗುವಂತೆ ತಿಳಿಹೇಳುತ್ತಾ; ದೇವ ಸನ್ನಿಧಿಯ ದೀಪ ನಿರಂತರ ಬೆಳಗುವಂತಾಗಲಿ ಎಂದು ಆಶಿಸಿದರು. ಬಯಲಿನ ನಡುವೆ ದೀಪ ಬೆಳಗಬಹುದು; ಆ ದೀಪ ಆರದಂತೆ ಗ್ರಾಮಸ್ಥರು ನೋಡಿಕೊಳ್ಳಬೇಕೆಂದು ಸೂಚ್ಯವಾಗಿ ನುಡಿದರಲ್ಲದೆ; ದೇವ ಸನ್ನಿಧಿಗಳು ಉತ್ತರೋತ್ತರ ಸಹಸ್ರಮಾನದೆಡೆಗೆ ಮುನ್ನಡೆಯುವಂತೆ ಕಾಪಾಡಿಕೊಳ್ಳುವದು ಭಕ್ತರ ಪಾಲಿನ ಕರ್ತವ್ಯವೆಂದರು.
ತಾಳತ್ಮನೆ ಶ್ರೀ ದುರ್ಗಾ ಭಗವತಿ ಸನ್ನಧಿಯ ಜೀರ್ಣೊದ್ಧಾರ ಸಮಿತಿ; ದೈವಜ್ಞರ ಸಹಿತ ಪುರೋಹಿತ ಬಳಗವನ್ನು ಮಂತ್ರಾಕ್ಷತೆ; ಪ್ರಸಾದದೊಂದಿಗೆ ಆಶೀರ್ವದಿಸಿದರು. ನೆರೆದಿದ್ದ ಸದ್ಭಕ್ತರಿಗೆ ದೇವರ ದರ್ಶನ, ಪ್ರಸಾದದೊಂದಿಗೆ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿತು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಮುಖರಾದ ಗಿರೀಶ್ ತಾಳತ್ಮನೆ, ಚೆಟ್ಟೋಳಿರ ಅಪ್ಪಯ್ಯ, ಚೆರಿಯಮನೆ ರಾಜ್ಕುಮಾರ್, ಅರೆಯಂಡ ರಘು, ಪ್ರಧಾನ ಸಲಹೆಗಾರ ಬಿ.ವಿ. ಕೃಷ್ಣಭಟ್, ಧಾರ್ಮಿಕ ಸಲಹೆಗಾರ ಬಿ. ಸತ್ಯೇಶ್ಭಟ್, ಹಣಕಾಸು ಸಮಿತಿಯ ಬಿ.ವೈ ರಾಜೇಶ್, ಸೀತಾರಾಂ ರೈ, ಬಿ.ಡಿ. ವಿಶ್ವನಾಥ್, ಬಿ.ಕೆ. ರವಿ ಸೇರಿದಂತೆ ಗ್ರಾಮದ ಹಿರಿಯರು, ನೇತಾಜಿ ಯುವಕ - ಯುವತಿ ಮಂಡಲ ಪದಾಧಿಕಾರಿಗಳು, ಅಧಿಕ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಂಡಿದ್ದರು.
ಸಂಜೆ ಧಾರ್ಮಿಕ ಸಭೆಯೊಂದಿಗೆ ಭಜನೆ, ಶ್ರೀ ದೇವಿ ಮಹಾತ್ಮೆ ಯಕ್ಷಗಾನ ದೊಂದಿಗೆ ಸಪ್ತಾಹದ ಕಾರ್ಯಕ್ರಮ ಸಮಾರೋಪಗೊಂಡಿತು.