ಮಡಿಕೇರಿ, ಫೆ. 12: ಕಾಡಿನೊಳಗೆ ಇರಬೇಕಾದ ‘ಅತಿಥಿ’ಯೊಂದು ಕಳೆದ ರಾತ್ರಿ ಮಡಿಕೇರಿ ನಗರದ ಜನನಿಬಿಡ ಸ್ಥಳಕ್ಕೆ ಆಗಮಿಸಿ ಸುತ್ತಮುತ್ತಲಿನ ನಿವಾಸಿಗಳಿಗೆ ತಡರಾತ್ರಿಯ ತನಕ ಪಡಿಪಾಟಲು ಮೂಡಿಸಿತು.ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಹಿಂಭಾಗದ ಅರಣ್ಯ ವಸತಿಗೃಹದ ಬಳಿ (ನಗರಸಭಾ ಮಾಜಿ ಸದಸ್ಯ ಚುಮ್ಮಿ ದೇವಯ್ಯ ಅವರ ಮನೆಯ ಸನಿಹ) ರಾತ್ರಿ 10.30ರ ವೇಳೆಗೆ ಭಾರೀ ಶಬ್ದ ಕೇಳಿ ಬಂದಿದೆ. ಅಕ್ಕಪಕ್ಕದವರು ಇದೇನಪ್ಪಾ ಎಂದು ಅವಲೋಕಿಸಿದಾಗ ಅಲ್ಲಿ ಕಡವೆವೊಂದು ಕಾಣಿಸಿಕೊಂಡಿದೆ. ಮನೆಯೊಂದರ ಗೋಡೆ ಹಾಗೂ ರಸ್ತೆಯ ಬದಿಯಲ್ಲಿ ಈ ‘ಅತಿಥಿ’ ಬಂದು ನಿಂತಿತ್ತು.ಅದರ ಕಣ್ಣು ಹಾಗೂ ಮುಖಭಾಗಕ್ಕೆ ಗಾಯವಾಗಿದ್ದು ಕಂಡು ಬಂದಿದೆ. ಪಾಪದ ಈ ಮೂಕ ಪ್ರಾಣಿಗೆ ಯಾವರೀತಿಯಲ್ಲಿ ಗಾಯವಾಗಿತ್ತೋ ತಿಳಿಯದು. ಆದರೆ ಅಲ್ಲಿನ ನಿವಾಸಿಗಳ ಕಾಳಜಿ ಹೆಚ್ಚಾಗಿತ್ತು. ಸನಿಹದಲ್ಲೇ ಇರುವ ಅರಣ್ಯ ಸಿಬ್ಬಂದಿಗಳಿಗೂ ವಿಷಯ ಮುಟ್ಟಿಸಿ ಅದರನ್ನು ಹಗ್ಗಹಾಕಿ ಹಿಡಿಯುವ ಯತ್ನ ನಡೆಸಲಾಯಿತು.

ಆದರೆ ಇದು ಈ ಸಂದರ್ಭ ಭಾರೀ ರಂಪಾಟವನ್ನೇ ನಡೆಸಿದೆ. ಕಣ್ಣುಕಾಣದ ಪರಿಸ್ಥಿತಿಯಲ್ಲಿ ಮನೆಯ ಗೋಡೆ, ಅಲ್ಲಿನ ಗೇಟ್, ಶೆಡ್‍ಗಳತ್ತ ಹಾರಿ ಬಿದ್ದು ಅದನ್ನು ಜಖಂಗೊಳಿಸಿದೆ. ಬಳಿಕ ತೀವ್ರ ಪ್ರಯಾಸದೊಂದಿಗೆ ಅದನ್ನು ಉದ್ದನೆಯ ಹಗ್ಗದ ಸಹಾಯದಿಂದ ಕನ್ಸರ್‍ವೇಟರ್ ಬಂಗ್ಲೋದೊಳಕ್ಕೆ ಸೇರಿಸಿ ಕಟ್ಟಿ ಹಾಕಲಾಯಿತು. ನಗರ ಪಶು ವೈದ್ಯರೊಬ್ಬರನ್ನು ಕರೆಸಲಾಯಿತಾದರೂ ಶುಶ್ರೂಷೆ ನೀಡಲು ಸಾಧ್ಯವಾಗಲಿಲ್ಲ. ತಡರಾತ್ರಿಯಾದ ಈ ಪರಿಸ್ಥಿತಿಯಲ್ಲೇ ಕಡವೆಯನ್ನು ಅಲ್ಲೇ ಕಟ್ಟಿ ಹಾಕಲಾಯಿತು.

ಬಳಿಕ ಇಂದು ಹುಣಸೂರಿನ ಅರಣ್ಯ ಇಲಾಖೆಯ ತಜ್ಞರನ್ನು ಕರೆಯಿಸಿ ಅರೆವಳಿಕೆ ಔಷಧಿ ನೀಡಿ ಕಡವೆಯನ್ನು ನಿಯಂತ್ರಿಸಿ ಕಣ್ಣು ಹಾಗೂ ಮುಖದ ಗಾಯಕ್ಕೆ ಆರೈಕೆ ಮಾಡಲಾಯಿತು. ಇಲಾಖೆಯವರ ಪ್ರಕಾರ ಕಣ್ಣು

(ಮೊದಲ ಪುಟದಿಂದ) ಸರಿಯಾಗುವ ಸಾಧ್ಯತೆಯಿದ್ದರಿಂದ ಇದನ್ನು ‘ಟಾಟಾ ಏಸ್’ ವಾಹನದಲ್ಲಿ ಕೊಂಡೊಯ್ದು ದುಬಾರೆ ಅರಣ್ಯಕ್ಕೆ ಬಿಡಲಾಗಿದೆ. ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯ ಕುರಿತು ‘ಶಕ್ತಿ’ಗೆ ಮಾಹಿತಿಯಿತ್ತ ನಾಗರಿಕರೊಬ್ಬರು ಕೊಡವ ಭಾಷೆಯಲ್ಲಿರುವ ‘ಕುಂದ್‍ಲೊರ್ ಕೇಮೊ’ ಹಾಡನ್ನು ನೆನೆದು ಅದೇ ರೀತಿಯಲ್ಲಿ ‘ಕುಂದ್‍ಲೊರ್ ಕಡಮೊ’ (ಕಡವೆ) ಎಂಬಂತೆ ಕರ್ತವ್ಯ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆ ಮೆರೆದಿದ್ದಾಗಿ ನುಡಿದರು.

-ಶಶಿ