ಶ್ರೀಮಂಗಲ, ಫೆ. 12: ಪೊನ್ನಂಪೇಟೆ ಉಪ ನೋಂದಾಣಿ ಕಚೇರಿಯಲ್ಲಿ ಜಾಗದ ರಿಜಿಸ್ಟ್ರೇಷನ್ ಮತ್ತು ರೈತರು ಬ್ಯಾಂಕ್‍ಗಳಿಂದ ಸಾಲ ಪಡೆಯುವ ಸಂದರ್ಭ ಪಾವತಿಸಬೇಕಾದ ಶುಲ್ಕವನ್ನು ಇನ್ನು ಮುಂದೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‍ನಿಂದ ಪಡೆದ ಡಿಡಿ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಪನೋಂದಾವಣಿ ಕಚೇರಿಯ ಅಧಿಕಾರಿ ಅನಿತಾ ಮೋಸೆಸ್ ತಿಳಿಸಿದ್ದಾರೆ.

ಒಂದೇ ಬ್ಯಾಂಕ್‍ನ ಒಂದೇ ಶಾಖೆಯಲ್ಲಿ ಶುಲ್ಕ ಪಾವತಿಸಲು ಡಿಡಿ ಸ್ವೀಕರಿಸುತ್ತಿದ್ದ ಕ್ರಮದಿಂದ ರೈತರಿಗೆ ತೊಂದರೆಯಾಗುತ್ತಿರುವ ಬಗ್ಗೆ ಕೊಡಗು ಬೆಳೆಗಾರರ ಒಕ್ಕೂಟ ಗಮನ ಸೆಳೆದ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸಲು ಕಾಲಾವಕಾಶ ಕೋರಲಾಗಿತ್ತು. ಇದೀಗ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳ ಡಿಡಿ ಸ್ವೀಕರಿಸುವ ಕ್ರಮವನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯ ಹಲವು ರೈತರಿಂದ ದೂರು ಬಂದ ಹಿನ್ನೆಲೆಯಲಿ ್ಲಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬೀಲೀರ ಹರೀಶ್ ಅಪ್ಪಯ್ಯ ನೇತೃತ್ವದಲ್ಲಿ ಉಪನೋಂದಾವಣಿ ಕಚೇರಿಯಲ್ಲಿ ಎಲ್ಲಾ ಬ್ಯಾಂಕ್‍ಗಳಿಂದ ಶುಲ್ಕ ಪಾವತಿಸಿಕೊಳ್ಳುವ ಡಿಡಿ ಸ್ವೀಕರಿಸುವಂತೆ ಒತ್ತಾಯಿಸಲಾಗಿತ್ತು.

ಪೊನ್ನಂಪೇಟೆ ಉಪನೋಂದಾವಣಿ ಕಚೇರಿಯಲ್ಲಿ ಇದುವರೆಗೆ ಪೊನ್ನಂಪೇಟೆ ಕೆನರಾ ಬ್ಯಾಂಕ್ ಶಾಖೆಯ ಡಿಡಿಗಳನ್ನು ಮಾತ್ರ ಸ್ವೀಕರಿಸಲಾಗುತ್ತಿತ್ತು. ಇತರ ಯಾವುದೇ ಬ್ಯಾಂಕ್‍ಗಳ ಡಿಡಿಗಳನ್ನು ಸ್ವೀಕರಿಸದೇ ಇರುವುದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿತ್ತು. ಒಂದೇ ಬ್ಯಾಂಕ್‍ನ ಶಾಖೆಯಲ್ಲಿ ಡಿಡಿಯನ್ನು ಪಡೆಯಬೇಕಾಗಿರುವುದರಿಂದ ಸಕಾಲದಲ್ಲಿ ರೈತರಿಗೆ ಡಿಡಿ ದೊರೆಯುತ್ತಿರಲಿಲ್ಲ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದರು. ಇದೀಗ ಉಪನೋಂದಾವಣಿ ಕಚೇರಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ನ ಡಿಡಿಗಳನ್ನು ಸ್ವೀಕರಿಸುವುದರಿಂದ ರೈತರು ಈ ಹಿಂದೆ ಒಂದೇ ಬ್ಯಾಂಕ್‍ನ್ನು ಅವಲಂಭಿಸಬೇಕಾದ ಅನಿವಾರ್ಯತೆ ತಪ್ಪಿದ್ದು ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲೀರ ಹರೀಶ್ ಅಪ್ಪಯ್ಯ ತಿಳಿಸಿದ್ದಾರೆ.

ಈ ಸಂದರ್ಭ ಕೊಡಗು ಬೆಳೆಗಾರ ಒಕ್ಕೂಟದ ಖಜಾಂಚಿ ಮಾಣೀರ ವಿಜಯ್ ನಂಜಪ್ಪ ಉಪಸ್ಥಿತರಿದ್ದರು.