ಕರಿಕೆ, ಫೆ. 12: ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ ಹಾಗೂ ಉಚಿತ ಸಮವಸ್ತ್ರ, ಶೂ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಮುಂಬರುವ ಪೂರ್ವ ಸಿದ್ಧತಾ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸುವಂತೆ ಹಾಗೂ ಇನ್ನುಳಿದಿರುವ ಕಡಿಮೆ ದಿನಗಳಲ್ಲಿ ಶಿಕ್ಷಕರ ಮಾರ್ಗದರ್ಶನದಂತೆ ಶ್ರಮವಹಿಸಿ ವಿಚಲಿತರಾಗದೆ ಅಭ್ಯಾಸದಲ್ಲಿ ತೊಡಗುವಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಕರೆ ನೀಡಿದರು.
ಕರಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಲಿ ಜಾರ್ಜ್ ಹಾಗೂ ಅಭಿವೃದ್ಧಿ ಅಧಿಕಾರಿ ಬಿಪಿನ್ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ಕೆ.ಆರ್., ಎಸ್ಡಿಎಂಸಿ ಸದಸ್ಯರು, ಶಿಕ್ಷಕರು ಹಾಜರಿದ್ದರು.
ತದನಂತರ ಶಾಲಾ ಗ್ರಾಹಕರ ಕ್ಲಬ್ ವತಿಯಿಂದ ನಡೆದ ವರ್ತಕ ಹಾಗೂ ಗ್ರಾಹಕ ಕೌಶಲ ಉತ್ತೇಜಿಸುವ ಸಲುವಾಗಿ ಮಕ್ಕಳಿಂದ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ತರಕಾರಿ ಖರೀದಿಸುವ ಮೂಲಕ ಸಂತೆಗೆ ಚಾಲನೆ ನೀಡಿದರು. ಸಂತೆಯಲ್ಲಿ ಮಕ್ಕಳಿಂದ ಆಹಾರ ಕಲಬೆರಕೆ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವ ಸಲುವಾಗಿ ವಿವಿಧ ಬಗೆಯ ಆಹಾರ ಕಲಬೆರಕೆ ವಸ್ತುಗಳ ಪ್ರಾತ್ಯಕ್ಷಿಕೆ ಜರುಗಿತು. ಸಂತೆಗೆ ಪೋಷಕರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.