ಸಿದ್ದಾಪುರ, ಫೆ.10: ಕಳೆದ 2 ದಿನಗಳ ಹಿಂದೆ ಮಾಲ್ದಾರೆಯಲ್ಲಿ ಕೃಷಿಕರೋರ್ವರನ್ನು ಕಾಡಾನೆಯು ದಾಳಿ ನಡೆಸಿ ಹತ್ಯೆ ಮಾಡಿದ ಘಟನೆ ಮಾಸುವ ಮುನ್ನ ಇದೀಗ ಕಾರ್ಮಿಕರೋರ್ವರ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರ ಗಾಯಗೊಂಡಿರುವ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ. ಚೆನ್ನಯ್ಯನಕೋಟೆ ನಿವಾಸಿ ಸುನಿಲ್ ಎಂಬವರು ಗುಹ್ಯ ಗ್ರಾಮದ ಪಟ್ಟಡ ಶ್ಯಾಂ ಅಯ್ಯಪ್ಪ ಎಂಬವರಲ್ಲಿ ಕಳೆದ ಒಂದು ವರ್ಷಗಳಿಂದ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದಾರೆ. ಎಂದಿನಂತೆ ಚೆನ್ನಯ್ಯನ ಕೋಟೆಯಿಂದ ತನ್ನ ಬೈಕ್‍ನಲ್ಲಿ ಸಿದ್ದಾಪುರ ಮಾರ್ಗವಾಗಿ ಗುಹ್ಯಕ್ಕೆ ತೆರಳುತ್ತಿದ್ದರು. ಸೋಮವಾರದಂದು ಬೆಳಿಗ್ಗೆ 7.45 ರ ಸುಮಾರಿಗೆ ಕೆಲಸಕ್ಕೆ ಬೈಕ್‍ನಲ್ಲಿ ತೆರಳುವ ಸಂದರ್ಭ ಗುಹ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕಾಫಿ ತೋಟದ ರಸ್ತೆ ಬದಿಯಲ್ಲಿ ಏಕಾಏಕಿ 3 ಕಾಡಾನೆಗಳು ಧಾವಿಸಿ ಬಂದಿತ್ತು ಎನ್ನಲಾಗಿದೆ. ಈ ಸಂದರ್ಭ ಬೈಕ್‍ನಲ್ಲಿ ತೆರಳುತ್ತಿದ್ದ ಸುನಿಲ್‍ನನ್ನು ಕಂಡ ಕಾಡಾನೆಗಳು ಅಟ್ಟಿಸಿಕೊಂಡು ಬಂದಿತ್ತು ಎನ್ನಲಾಗಿದೆ. ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ತನ್ನ ಬೈಕನ್ನು ಬಿಟ್ಟು ಓಡಿಹೋಗಲು ಪ್ರಯತ್ನಿಸಿದಾಗ (ಮೊದಲ ಪುಟದಿಂದ) ಒಂದು ಕಾಡಾನೆಯು ಸುನಿಲ್‍ನ ಮೇಲೆ ದಾಳಿ ನಡೆಸಿತು. ಸುನಿಲ್‍ನ ಸೊಂಟದ ಭಾಗಕ್ಕೆ ಕಾಡಾನೆ ತುಳಿದು ಸೊಂಟದ ಮೂಳೆ ಮುರಿದಿರುತ್ತದೆ. ಅಲ್ಲದೇ ತೊಡೆಯ ಭಾಗಕ್ಕೆ ಗಾಯವಾಗಿದ್ದು, ಮೇಲೇಳದೆ ರಸ್ತೆ ಬದಿಯಲ್ಲಿ ನರಳಾಡುತ್ತಿದ್ದರು. ಈ ಸಂದರ್ಭ ಗುಹ್ಯ ಗ್ರಾಮದ ಕಾಫಿ ಬೆಳೆಗಾರ ನಡಿಕೇರಿಯಂಡ ಪೊನ್ನಪ್ಪ ಅವರ ತೋಟಕ್ಕೆ ಕೆಲಸದ ಕಾರ್ಮಿಕರನ್ನು ಕರೆತರಲು ತೆರಳುತ್ತಿದ್ದ ಸಂದರ್ಭ ಗಂಭೀರ ಗಾಯಗೊಂಡು ನರಳಾಡುತ್ತಿದ್ದ ಸುನಿಲ್‍ನನ್ನು ನೋಡಿ ಮೇಲಕ್ಕೆತ್ತಿದರು.
ಜೀಪಿನ ಶಬ್ದದಿಂದ ಕಾಡಾನೆಯು ಅಲ್ಲಿಂದ ಕಾಲ್ಕಿತ್ತಿತ್ತು. ನಂತರ ಸಮೀಪದ ಕಾಫಿ ತೋಟಕ್ಕೆ ತೆರಳಿತು. ಪೊನ್ನಪ್ಪನವರು ಘಟನೆ ಸ್ಥಳಕ್ಕೆ ಬಾರದಿದ್ದಲ್ಲಿ ಸುನಿಲ್ ಅವರನ್ನು ಕಾಡಾನೆಗಳು ಸಾಯಿಸುತ್ತಿ ದ್ದವು ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡು ನಿತ್ರಾಣ ದಲ್ಲಿದ್ದ ಗಾಯಾಳು ಸುನಿಲ್‍ನನ್ನು ಪೊನ್ನಪ್ಪರವರು ತಮ್ಮ ಜೀಪಿನಲ್ಲಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದರು. ಇಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಸುನಿಲ್ ಮಾತನಾಡಲು ಕೂಡ ಕಷ್ಟವಾಗಿದ್ದು; ಸೊಂಟಕ್ಕೆ ಗಂಭೀರ ಗಾಯವಾಗಿದ್ದು ಕುಳಿತುಕೊಳ್ಳಲು ಹಾಗೂ ನಡೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ.
ಅದೃಷ್ಟವಶಾತ್ ಇನ್ನೂ ತಡವಾಗಿದ್ದರೆ ಆ ರಸ್ತೆಯಲ್ಲಿ ಶಾಲೆಗೆ ತೆರಳುವ ಮಕ್ಕಳು ಹಾಗೂ ಸಾರ್ವಜನಿಕರು ಕಾಡಾನೆ ದಾಳಿಗೆ ಸಿಲುಕುತ್ತಿದ್ದರು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಗುಹ್ಯ ಸರ್ಕಾರಿ ಶಾಲೆಯ ಆವರಣದ ಒಳಗೆ ಕಾಡಾನೆಗಳು ದಾಟುತ್ತಿದ್ದ ಚಿತ್ರಗಳು ವೈರಲ್ ಆಗಿತ್ತು. ಗುಹ್ಯ ಗ್ರಾಮದಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯಿಂದ ಬೆಳೆಗಾರರು ಹಾಗೂ ಕಾರ್ಮಿಕರು ಭಯಭೀತ ರಾಗಿದ್ದಾರೆ.
-ವಾಸು ಎ.ಎನ್.