ಬೆಂಗಳೂರು, ಫೆ. 10: ಕೊಡಗಿನಲ್ಲಿ ಭೂಪರಿವರ್ತನೆ ನಿಯಮವನ್ನು ಕಳೆದ ಒಂದು ವರ್ಷದಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ್ ಪ್ರಕಟಿಸಿದ್ದಾರೆ. ಸೋಮವಾರ ವಿಧಾನ ಸೌಧದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಭೂಪರಿವರ್ತನೆ ಸ್ಥಗಿತದಿಂದ ಜಿಲ್ಲೆಯಲ್ಲಿ ಗಂಭೀರ ಸಮಸ್ಯೆ ಉಂಟಾಗಿರುವ ಬಗ್ಗೆ ಕೊಡಗು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸರಕಾರದ ಗಮನಕ್ಕೆ ತಂದಿದ್ದರು. ಅಲ್ಲದೆ ಭೂಪರಿವರ್ತನೆಯನ್ನು ಮರು ಕಲ್ಪಿಸಬೇಕೆಂದು ಜಿಲ್ಲೆಯಿಂದ ಸಾವಿರಾರು ಮಂದಿ ಲಿಖಿತ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಡಗಿನ ಜನ ಸಾಮಾನ್ಯರ ಹಿತದೃಷ್ಟಿಯಿಂದ ಭೂಪರಿವರ್ತನಾ ಕಾರ್ಯವನ್ನು ಮರು ಪ್ರಾರಂಭಿಸ ಬೇಕೆಂದು ಮುಖ್ಯಮಂತ್ರಿಗಳ ಕಚೇರಿಯಿಂದಲೂ ಸೂಚನೆ ನೀಡಲಾಗಿತ್ತು.ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು ಹಾಗೂ ರಾಜ್ಯದ ಉನ್ನತ ಅಧಿಕಾರಿಗಳ ಸಭೆಯನ್ನು ಇಂದು ಬೆಂಗಳೂರಿನಲ್ಲಿ ನಡೆಸಲಾಯಿತು ಎಂದು ಸಚಿವ ಆರ್. ಅಶೋಕ್ ಮಾಹಿತಿಯಿತ್ತರು. ಭೂಪರಿವರ್ತನೆಗೆ ಮರು ಅವಕಾಶ ಕಲ್ಪಿಸಲು ಕೆಲವು ನಿಬಂಧನೆಗಳೊಂದಿಗೆ ನಿರ್ಧರಿಸಲಾಯಿತು.

ಮುಖ್ಯವಾಗಿ ಬೆಟ್ಟ ಪ್ರದೇಶಗಳಿಂದ ಸಹಜವಾಗಿ ಹರಿದು ಬರುವ ನೀರನ್ನು ತಡೆದು, ಅಂತಹ ಕಡೆಗಳಲ್ಲಿ ರೆಸಾರ್ಟ್ ಇತ್ಯಾದಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡಲಾಗುವುದಿಲ್ಲ. ಒಳಚರಂಡಿಗಳು ಇರುವಂತಹ ಪ್ರದೇಶಗಳಲ್ಲಿ ಗಿರಿಕಂದರಗಳಿಂದ ನೀರು ಹರಿದು ಬರುವಂತಹ ಸ್ಥಳಗಳನ್ನು ಇನ್ನು ಮುಂದೆ ‘ಬಫರ್ ಜೋನ್’ ಎಂದು ಘೋಷಿಸ ಲಾಗುತ್ತದೆ. ಅಂತಹ ಪ್ರದೇಶಗಳಲ್ಲಿ ಮನೆ ಅಥವಾ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ನೀರನ್ನು ತಡೆಹಿಡಿಯುವಂತಹ ಕಾರ್ಯಕ್ಕೆ ವಿರಾಮ ಹಾಕಲಾಗುತ್ತದೆ. ಏಕೆಂದರೆ ಹಾಗೆ ಮಾಡಿದಾಗ ಆ ಪ್ರದೇಶಗಳಲ್ಲಿ ಸ್ಥಗಿತಗೊಳ್ಳುವ (ಮೊದಲ ಪುಟದಿಂದ) ನೀರಿನ ಹರಿವು ಬೇರೆಡೆಗೆ ತಿರುವು ಪಡೆದು ಅಲ್ಲಿ ಭೂಕುಸಿತ ಉಂಟಾಗುವ ಅಪಾಯ ಎದುರಾಗುವುದರಿಂದ ಈ ನಿರ್ಬಂಧ ವಿಧಿಸಲಾಗಿದೆ.

ಇದೇ ರೀತಿ ವಾಣಿಜ್ಯ ಕಟ್ಟಡಗಳು, ಶಾಲೆಗಳು, ರೆಸಾರ್ಟ್‍ಗಳು, ಪೆಟ್ರೋಲ್ ಬಂಕ್‍ಗಳು ಅಥವಾ ಖಾಸಗಿ ಉದ್ಯಮಗಳನ್ನು ಪ್ರಾರಂಭಿಸಬೇಕಾದರೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಿಂದ ಕಡ್ಡಾಯ ನಿರಾಪೇಕ್ಷಣಾ ಪತ್ರ ಪಡೆದು ಬಳಿಕ ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆದು ಕಟ್ಟಡಗಳನ್ನು ನಿರ್ಮಿಸಬೇಕಾಗಿದೆ.

ಅಲ್ಲದೆ 2018 ಹಾಗೂ 2019ರಲ್ಲಿ ಜಿಲ್ಲೆಯ ಯಾವ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿತ್ತು. ಆ ಪ್ರದೇಶಗಳಲ್ಲಿ ಭೂಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದಿಲ್ಲ. ಇದೇ ಅಲ್ಲದೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಿಂದ ವರದಿ ತರಿಸಿ, ಈ ಹಿಂದೆ ಭೂಕುಸಿತದ ಪ್ರದೇಶವಲ್ಲದೆ ಮುಂದೆಯೂ ಎದುರಾಗಬಹುದಾದ ಭೂಕುಸಿತ ಸಂಭವನೀಯ ಪ್ರದೇಶ ಹಾಗೂ ‘ರೆಡ್ ಅಲರ್ಟ್’ ಸ್ಥಳಗಳಲ್ಲಿ ಭೂ ಪರಿವರ್ತನೆಗೆ ಅವಕಾಶ ಇರುವುದಿಲ್ಲ.