ಮಡಿಕೇರಿ: ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್ ರಿಬ್ಬನ್, ರೆಡ್ ಕ್ರಾಸ್, ರಾ.ಸೇ. ಯೋಜನಾ ಘಟಕದ ವತಿಯಿಂದ ಏಡ್ಸ್ ಜಾಗೃತಿ ಉಪನ್ಯಾಸ ಕಾರ್ಯಕ್ರಮವು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಮೇಲ್ವಿಚಾರಕರು ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಸುನಿತಾ ಮುತ್ತಣ್ಣ ಅವರು ಮಾತನಾಡಿ, ಸದೃಢ ಯುವ ಜನರನ್ನು ರೂಪಿಸುವುದು ಮುಖ್ಯ ಗುರಿಯಾಗಿದೆ ಎಂದರು. ಹೆಚ್‍ಐವಿ ಸೊಂಕಿನ ಬಗ್ಗೆ ಇರುವ ತಪ್ಪು ಕಲ್ಪನೆ ಮತ್ತು ತಾರತಮ್ಯ ಜನರಿಂದ ದೂರವಾಗಬೇಕು. ಏಡ್ಸ್ ಹೆಚ್.ಐ.ವಿಯ ಕೊನೆಯ ಹಂತವಾಗಿದ್ದು, ಬಿಳಿ ರಕ್ತ ಕಡಿಮೆಯಾಗುವುದರಿಂದ ಬೇರೆ ಬೇರೆ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ. ಮುಖ್ಯವಾಗಿ ಕ್ಷಯರೋಗವು ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ವಿವರಿಸಿದರು.

ಹೆಚ್.ಐ.ವಿ. ಮತ್ತು ಏಡ್ಸ್ ಪೀಡಿತರ ವಿರುದ್ಧ ಉದ್ಯೋಗ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವೆಗಳು, ಸಾರ್ವಜನಿಕ ಅಥವಾ ಖಾಸಗಿ ಕಚೇರಿಯಲ್ಲಿ ತಾರತಮ್ಯ ಮಾಡುವಂತಿಲ್ಲ ಎಂಬುದರ ಬಗ್ಗೆ ಇರುವ ವಿವಿಧ ಕಾನೂನುಗಳು ಮತ್ತು ಅದನ್ನು ನಿರಾಕರಿಸಿದರೆ ದಂಡ ಮತ್ತು ಜೈಲುವಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಪ್ರಾಧ್ಯಾಪಕ ರಾಘವೆಂದ್ರ ಮಾತನಾಡಿ, ಯುವ ಜನತೆಯು ಸೇವಾ ಮನೋಭಾವವನ್ನು ಬೆಳಸಿಕೊಳ್ಳುವುದರಿಂದ ಮನಸ್ಸನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಯುವ ಜನರು ಹದಿಹರೆಯದ ವಯಸ್ಸಿನಲ್ಲಿ ಮಾರಕ ರೋಗಕ್ಕೆ ತುತ್ತಾಗುತ್ತಿದ್ದಾರೆ, ಹೆಚ್‍ಐವಿ ಏಡ್ಸ್ ನಂತಹ ರೋಗಕ್ಕೆ ತುತ್ತಾಗದಂತೆ ಯುವಕ ಯುವತಿಯರು ಭವ್ಯವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೆ.ಸಿ. ದಯಾನಂದ ಇತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಶಿವ ಪ್ರಾರ್ಥಿಸಿದರು.

ಕುಶಾಲನಗರ: ವಿದ್ಯಾರ್ಥಿಗಳು ಆಸಕ್ತಿಗೆ ಅನುಗುಣವಾಗಿ ಕ್ಷೇತ್ರಗಳ ಆಯ್ಕೆ ಮಾಡಿಕೊಂಡಲ್ಲಿ ಗುರಿಮುಟ್ಟಲು ಸಾಧ್ಯ ಎಂದು ಕುಶಾಲನಗರ ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿಜಯಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ಫಲಿತಾಂಶ ವೃದ್ಧಿ ಹಾಗೂ ಪರೀಕ್ಷೆ ಎದುರಿಸುವ ಬಗ್ಗೆ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ಮಾತನಾಡಿ, ನಿರಂತರ ಅಭ್ಯಾಸದಿಂದ ಯಶಸ್ಸು ಪಡೆದುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಓದಿನತ್ತ ತಮ್ಮ ಗಮನ ಕೇಂದ್ರೀಕರಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿ ಆರ್.ಎ. ಚೇತನ್‍ರಾಮ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಅಗತ್ಯ ಸಲಹೆಗಳನ್ನು ನೀಡಿದರು. ವಿಜಯಕರ್ನಾಟಕ ಹಿರಿಯ ಉಪಸಂಪಾದಕ ಲೋಕೇಶ್ ನೀರಬಿದಿರೆ ಪ್ರಾಸ್ತಾವಿಕ ನುಡಿಗಳಾಡಿದರು.

ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್, ಶಿಕ್ಷಣಾಧಿಕಾರಿ ಕಾಶಿನಾಥ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಯಶ್ವಿನಿ ಅವರನ್ನು ಗೌರವಿಸಿದರು. ವಿವಿಧ ಶಾಲೆಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮೂರ್ನಾಡು: ಗುರು-ಶಿಷ್ಯರ ಬಾಂಧವ್ಯ ತುಂಬಾ ಅನನ್ಯವಾದುದು. ವಿದ್ಯಾರ್ಥಿಗಳು ತಮಗೆ ದಾರಿ ತೋರಿಸಿದ ಶಿಕ್ಷಕರ ಬಗ್ಗೆ ಪೂಜ್ಯ ಭಾವನೆ ಇಟ್ಟು ಗೌರವದಿಂದ ಕಾಣಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ ಹೇಳಿದರು.

ಮೂರ್ನಾಡು ಪ್ರೌಢಶಾಲೆಯಲ್ಲಿ 1993-95ರ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪ್ರಕೃತಿ ರಶ್ಮಿ ವಾಟ್ಸಪ್ ಕೂಟದಿಂದ ಏರ್ಪಡಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗೆ ಗೌರವ ನೀಡಿ ಪೂಜ್ಯ ಭಾವನೆಯಿಂದ ಮಾತನಾಡಿಸಿದಾಗ ಶಿಕ್ಷಕ ವೃತ್ತಿಯಿಂದ ಜನ್ಮ ಸಾರ್ಥಕವಾಯಿತು ಎಂದೆನಿಸುತ್ತದೆ. ಶಿಕ್ಷಕರಿಗೆ ಅದುವೇ ಸಂತೃಪ್ತಿಯನ್ನು ಸಂತೋಷವನ್ನು ತಂದುಕೊಡುತ್ತದೆ.

ನೆನಪುಗಳನ್ನು ಮೆಲುಕು ಹಾಕುವುದು ವಿಶೇಷ ನೆಮ್ಮದಿಯನ್ನು ತರುತ್ತದೆ ಎಂದರು. ಹಿರಿಯ ಶಿಕ್ಷಕ ಎಸ್.ಡಿ. ಪ್ರಶಾಂತ್, ಹೆಚ್.ಬಿ. ಕೃಷ್ಣಪ್ಪ, ನಿವೃತ್ತ ಯೋಧ ಮತ್ತು ಹಳೆ ವಿದ್ಯಾರ್ಥಿ ಬಿ.ಕೆ. ಕೇಶವ ಅವರನ್ನು ಈ ಸಂದರ್ಭ ಶಾಲು ಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಬಾಲಕೃಷ್ಣ, ರೂಪಶ್ರೀ, ಕೇಶವ, ಹಮೀದ್, ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸವಿನೆನಪಿಗಾಗಿ ಹಳೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು.

ಗೋಣಿಕೊಪ್ಪ: ನ್ಯಾಷನಲ್ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದ ಇಂಗ್ಲೀಷ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 15 ಚಿನ್ನ, 16 ಬೆಳ್ಳಿ, 8 ಕಂಚಿನ ಪದಕ ಪಡೆದುಕೊಂಡಿದ್ದಾರೆ. ದೀಕ್ಷಾ ಎಂ.ಜೆ. ವಲಯ ಮಟ್ಟದಲ್ಲಿ ಡಿಸ್ಟಿಂಕ್ಷನ್ ಪಡೆದು ವಿಶೇಷ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.ಸೋಮವಾರಪೇಟೆ: ಇಲ್ಲಿನ ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಮತ್ತು ಪದವಿ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಫಾ. ಕೆ.ಎಂ. ವಿಲಿಯಂ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕು. ವಿದ್ಯಾಭ್ಯಾಸದೊಂದಿಗೆ ಕ್ರೀಡೆಯತ್ತಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಭವಿಷ್ಯವನ್ನು ಉತ್ತಮಗೊಳಿಸಿ ಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ರಾಮಕೃಷ್ಣ ಶಾರದಾಶ್ರಮದ ಶಾಂತಿವೃತಾನಂದ ಸ್ವಾಮಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಡಾ. ಭವಾನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೊ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ವಿದ್ಯಾಸಂಸ್ಥೆಯ ಸಂಚಾಲಕ ಎಂ. ರಾಯಪ್ಪ, ಪ್ರಾಂಶುಪಾಲ ಅಂತೋಣಿರಾಜ್, ಓಎಲ್‍ವಿ ಕಾನ್ವೆಂಟ್‍ನ ಮುಖ್ಯಸ್ಥೆ ಮಮತ, ಪ.ಪಂ. ಸದಸ್ಯೆ ಶೀಲಾ ಡಿಸೋಜ ಅವರುಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳು, ಪೋಷಕರು, ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರುಗಳನ್ನು ವಿದ್ಯಾಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ನಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೋಪಟ್ಟಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಪಟ್ಟಿಯ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭ ಬೆಂಗಳೂರಿನ ಕಮ್ಯುನಿಕೇಷನ್ ಮತ್ತು ಅಡ್ವಟೈಸಿಂಗ್ ಸಂಸ್ಥೆಯಿಂದ ಶಾಲೆಗೆ 5 ನಲಿ-ಕಲಿ ಮೇಜು, 20 ಕುರ್ಚಿಗಳು, 6 ಡೆಸ್ಕ್ ಹಾಗೂ ಬೆಂಚುಗಳು, 1 ಶೆಲ್ಫ್, ನೀರಿನ ಫಿಲ್ಟರ್, ಆಟೋಪಕರಣಗಳನ್ನು ಕೊಡುಗೆ ನೀಡಲಾಯಿತು.

ಸಾಮಗ್ರಿಗಳನ್ನು ನೀಡಲು ಸಹಕರಿಸಿದ ಕೊಟ್ಟುಕತ್ತೀರ ಚೆಟ್ಟಿಚ್ಚ ಮತ್ತು ಜಮುನಾ ದಂಪತಿಯ ಪುತ್ರ ಕೊಟ್ಟುಕತ್ತೀರ ವಿಜಯ ಕುಮಾರ ಅವರಿಗೆ ಈ ಸಂದರ್ಭ ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಬಿ.ಆರ್. ದೇರಣ್ಣ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪರವಂಡ ಪ್ರದೀಪ್ ಹಾಗೂ ಸದಸ್ಯರು, ಪೋಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಶಿಕ್ಷಕಿಯರಾದ ಯು.ಪಿ. ಸರೋಜ ಸ್ವಾಗತಿಸಿ, ಜಯಂತಿ ವಂದಿಸಿದರು.

ಮೂರ್ನಾಡು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುವೆಂಪು ಅವರ ಬದುಕು ಬರಹ ಶೀರ್ಷಿಕೆಯಡಿ ಮಡಿಕೇರಿಯಲ್ಲಿ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮೂರ್ನಾಡು ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಾದ ರಮ್ಯ ಎನ್.ಡಿ. ಹಾಗೂ ಅಜಿತ್ ಜೆ.ಎಸ್. ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರೂ. 8000 ನಗದು ಬಹುಮಾನ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ ತಿಳಿಸಿದ್ದಾರೆ.

ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಮಡಿಕೇರಿಯಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಮೂರ್ನಾಡು ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಕೆ.ಎಂ. ಫಾತಿಮಾ ದ್ವಿತೀಯ ಸ್ಥಾನವನ್ನು ಹಾಗೂ ವಿವೇಕಾನಂದರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿದ್ಯಾರ್ಥಿ ರೋಶನ್ ಶರೀಫ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮಡಿಕೇರಿ: ವಿವೇಕಾನಂದ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆಯನ್ನು ಪದವಿಪೂರ್ವ ಕಾಲೇಜು ಮೂರ್ನಾಡುವಿನಲ್ಲಿ ಹಮ್ಮಿಕೊಳ್ಳಲಾಯಿತು.

ಡಿವೈನ್ನ್ ಪಾರ್ಕ್‍ನ ಅಧಿಕಾರಿ ದೇವರಗುಂಡ ಯಶ್ವಂತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಭೆಯಲ್ಲಿ ಪ್ರಾಂಶುಪಾಲೆ ದೇವಕಿ ಪಿ.ಎಂ., ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಯು.ಸಿ. ಮಾಲತಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮುದ ಕಾರ್ಯಕ್ರಮ ನಿರೂಪಿಸಿದರು.