ಮಡಿಕೇರಿ, ಜ. 24: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿ ಇರುವ ಜಾಗದಲ್ಲಿ ನಿರ್ಮಾಣವಾಗುತ್ತಿರುವ ‘ಕೂರ್ಗ್ ವಿಲೇಜ್’ ಪ್ರವಾಸಿ ಯೋಜನೆ ಸಂಬಂಧ ತಮ್ಮನ್ನೂ ಕೂಡ ವಾದಿಗಳನ್ನಾಗಿ ಪರಿಗಣಿಸಬೇಕೆಂದು ಕೋರಿ ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಅವರು ಸಲ್ಲಿಸಿರುವ ಅರ್ಜಿ ಸಂಬಂಧ ತೀರ್ಪನ್ನು ಫೆ. 3ಕ್ಕೆ ಕಾಯ್ದಿರಿಸಲಾಗಿದೆ.ಕೂರ್ಗ್ ವಿಲೇಜ್ ಯೋಜನೆಯಿಂದ ಪರಿಸರಕ್ಕೆ ಧಕ್ಕೆಯಾಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಹರೀಶ್ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು; ಈ ಪ್ರಕರಣದಲ್ಲಿ ತಮ್ಮನ್ನೂ ಕೂಡ ಅರ್ಜಿದಾರರಾಗಿ ಪರಿಗಣಿಸಬೇಕೆಂದು ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರಕಾರಿ ಅಭಿಯೋಜಕ ಶ್ರೀಧರನ್ ನಾಯರ್ ಹಾಗೂ ಅರ್ಜಿದಾರ ಹರೀಶ್ ಅವರುಗಳು ಆಕ್ಷೇಪಣೆ ಸಲ್ಲಿಸಿದ್ದರಿಂದ ವಿಚಾರಣೆಯನ್ನು ತಾ. 23ಕ್ಕೆ ಮುಂದೂಡಲಾಗಿತ್ತು.
ಅದರಂತೆ ನಿನ್ನೆ ಪ್ರಿನ್ಸಿಪಲ್ ಮುನ್ಸಿಪ್ ಸಿವಿಲ್ ಜಡ್ಜ್ ಕಿರಿಯ ವಿಭಾಗದ ನ್ಯಾಯಾಧೀಶರಾದ ಬಿ.ಕೆ. ಮನು ಅವರು ವಿಚಾರಣೆ ಕೈಗೆತ್ತಿಕೊಂಡಿದ್ದರು. ಸರಕಾರಿ ಅಭಿಯೋಜಕ ಶ್ರೀಧರನ್ ಅವರು; ಈ ಪ್ರಕರಣದಲ್ಲಿ ರವಿಚಂಗಪ್ಪ ಅವರನ್ನು ಅರ್ಜಿದಾರರಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ; ಇದಕ್ಕೆ ಆಕ್ಷೇಪಣೆ ಇರುವದಾಗಿ ವಾದಿಸಿದರು. ರವಿಚಂಗಪ್ಪ ಪರ ಹಿರಿಯ ವಕೀಲ ಬಿ.ಎ. ಮಾಚಯ್ಯ ಅವರು, ವಾದ ಮಂಡಿಸಿದರು. ವಾದ - ವಿವಾದ ಆಲಿಸಿದ ನ್ಯಾಯಾಧೀಶರು ಸಂಬಂಧದ ತೀರ್ಪನ್ನು ಫೆ. 3ಕ್ಕೆ ನಿಗದಿಪಡಿಸಿ; ವಿಚಾರಣೆಯನ್ನು ಮುಂದೂಡಿದ್ದಾರೆ.