ಮಡಿಕೇರಿ, ಜ.24: ಗುರುವಾರ ದಿನ ಪೊಲೀಸ್ ಇಲಾಖೆಯಿಂದ ತೋಟ ಕಾರ್ಮಿಕರ ದಾಖಲಾತಿಗಳ ತಪಾಸಣೆ ನಡೆದ ಬೆನ್ನಲ್ಲೇ ಪೊಲೀಸ್ ಇಲಾಖೆಯಿಂದ ಜಿಲ್ಲಾ ಕಾರ್ಮಿಕ ಇಲಾಖೆ ವಿವರ ಮಾಹಿತಿ ಬಯಸಿದೆ. ಜಿಲ್ಲಾ ಕಾರ್ಮಿಕಾಧಿಕಾರಿಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ ಕಳುಹಿಸಿರುವ ಪತ್ರದಲ್ಲಿ ಕಾರ್ಮಿಕರ ಬಗ್ಗೆ ಪಡೆಯಲಾಗಿರುವ ಮಾಹಿತಿಯನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ. ಕಾರ್ಮಿಕ ಇಲಾಖಾ ರಾಜ್ಯ ಕಾರ್ಯದರ್ಶಿ ಯವರು ಕಳುಹಿಸಿರುವ ಟ್ವಿಟರ್ ಸಂದೇಶದ ಅನ್ವಯ ಈ ಮಾಹಿತಿ ಬಯಸಿರುವದಾಗಿ ತಿಳಿಸಿದ್ದಾರೆ. ಕಾರ್ಮಿಕರ ಮಾಹಿತಿ ದಾಖಲಾತಿ ಪರಿಶೀಲನೆಯನ್ನು ಯಾವ ಸೆಕ್ಷನ್ ಅನ್ವಯ ನಡೆಸಲಾಗಿದೆ, ಕಳೆದ ವರ್ಷ ಈ ಕಾರ್ಯ ಮಾಡಲಾಗಿತ್ತಾ, ಕಾರ್ಮಿಕರ ವಿರುದ್ಧ ಏನಾದರೂ ಪುಕಾರಿದ್ದಿತ್ತ, ದಾಖಲಾತಿ ಪರಿಶೀಲನೆ ದಿನ ಅವರಿಗೆ ದಿನದÀ ಭತ್ಯೆ ನೀಡಲಾಗಿದೆಯೇ? ಹಾಗೂ ಕಾರ್ಮಿಕರ ಕನಿಷ್ಟ ವೇತನ ಲಭ್ಯತೆÀ ಕುರಿತು ಮಾಹಿತಿ ಪಡೆಯಲಾಗಿದೆಯೇ ಇತ್ಯಾದಿ ವಿವರ ಒದಗಿಸುವಂತೆ ಈ ಪತ್ರದಲ್ಲಿ ಕೋರಲಾಗಿದೆ.