ಎಂದಿನಂತೆ ಕತ್ತಲೆಯ ತೆರೆ ಸರಿಸಿದ ಸೂರ್ಯ ಅಂದು ಉಲ್ಲಾಸಕರವಾಗಿ ಮೂಡಿಬಂದು ಎಲ್ಲರಲ್ಲೂ ಉತ್ಸಾಹದ ಹುರುಪನ್ನು ಹೊತ್ತು ತಂದಿದ್ದ. ಆ ದಿನ ಜನವರಿ 18 ಒಂಟಿಯಂಗಡಿ ಸರ್ಕಾರಿ ಶಾಲೆಗಳ ನಲಿ-ಕಲಿ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಡಗರ. ಹೌದು ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರಿನ ಎಲ್ಲ ಶಾಲೆಗಳ ಮಕ್ಕಳು ಒಂಟಿಯಗಂಡಿಯಲ್ಲಿ ಸೇರಿ ಹಬ್ಬದ ವಾತಾವರಣವನ್ನು ಸಂಭ್ರಮಿಸುವ ಸಿದ್ಧತೆಯಲ್ಲಿದ್ದರು.
“ಪ್ರಶಸ್ತಿ ಪ್ರದಾನ ಸಮಾರಂಭ” ಈ ಕಾರ್ಯಕ್ರಮದ ತೋರಣದಲ್ಲಿ ನೇತಾಡುತಿದ್ದ ಸ್ವಾಗತ ಫಲಕ ಸಾರ್ವಜನಿಕರನ್ನು ತನ್ನತ್ತ ಸೆಳೆಯಿತು. ಒಂಟಿಯಂಗಡಿ ಪ್ರಾಥಮಿಕ ಶಾಲೆಯ ಗೇಟ್ನಿಂದ ಪ್ರಾರಂಭವಾದ ಬಲೂನು ಜೊಂಪೆಗಳು, ಬಣ್ಣದ ಕಾಗದಗಳ ಅಲಂಕಾರ, ಶಾಲಾವರಣ ಹಾಗೂ ಮೈದಾನದ ವೇದಿಕೆಯವರೆಗೂ ಮೈ ಮನಸ್ಸನ್ನು ಎಳೆದುಕೊಂಡು ಹೋಗುವಂತಿತ್ತು. ವೇದಿಕೆಯ ಅಲಂಕಾರವಂತೂ ಅಲ್ಲಿನ ಶಿಕ್ಷಕರ, ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಅನಾವರಣ ಮಾಡಿತ್ತು. ಶಾಲಾ ವಿದ್ಯಾರ್ಥಿಗಳು ಬಿಳಿ ಸಮವಸ್ತ್ರದಲ್ಲಿ ಅರಳಲಿರುವ ಮೊಗ್ಗುಗಳೆಂತೆಯೂ, ಶಿಕ್ಷಕರು ಗುಲಾಬಿ ಬಣ್ಣದ ಸೀರೆಯಲ್ಲಿ ಗುಲಾಬಿ ಅರಳಿದಂತೆಯೂ ಕಂಗೊಳಿಸುತ್ತಿದ್ದರು.
ಈ ಕಾರ್ಯಕ್ರಮ ಹೇಗಿರಬಹುದು ಎಂಬ ಕುತೂಹಲ ಆಹ್ವಾನ ದೊರಕಿದಾಗಿನಿಂದಲೂ ಮೂಡಿ ಮರೆಯಾಗುತ್ತಿತ್ತು. ಆದರೆ ಕಾರ್ಯಕ್ರಮ ಆರಂಭದಿಂದ ಅಂತ್ಯದವರೆಗೂ ಕಣ್ಣು ಮಿಟುಕಿಸಲು ಕೂಡಾ ಅವಕಾಶ ದೊರೆಯದಂತಹ ಅದ್ಭುತ ಅನುಭವ ಉಣ ಬಡಿಸಿಬಿಟ್ಟಿತ್ತು. ವೃತ್ತಿ ಭಾಗವಾಗಿ ಮೈ ಮನದೊಳಗೆಲ್ಲೋ ಅವಿತುಕೊಂಡಿದ್ದ ಕೊಂಚ ಆಲಸ್ಯವನ್ನು ಕೂಡಾ ಬೆನ್ನಟ್ಟಿ ಓಡಿಸುವಂತೆ. ವಿದ್ಯಾರ್ಥಿನಿಯರು ಗಣಪತಿಯ ಪ್ರಾರ್ಥನೆ ಹಾಡುತ್ತಿರುವುದನ್ನು ಕೇಳುತ್ತಿರುವಂತೆಯೇ ಸುಂದರ ಗಣಪತಿಯ ಚಿತ್ರವನ್ನು ವಿದ್ಯಾರ್ಥಿಯೊಬ್ಬ ತನ್ನ ಕಲಾ ಕುಂಚದಿಂದ ಬಿಡಿಸಿಯೇ ಬಿಟ್ಟಿದ್ದ ಅದನ್ನು ನೋಡಿ “ಭೇಷ್” ಎಂಬ ಉದ್ಗಾರ ಅಲ್ಲಿದ್ದ ಪ್ರತಿಯೊಬ್ಬರ ಬಾಯಲ್ಲೂ ಮೊಳಗಿರಲೇಬೇಕು.
ಕಾರ್ಯಕ್ರಮದ ಸಿಆರ್ಪಿ ಸುಷಾರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಕಡಿಮೆಯಾಗುತ್ತಿ ರುವ ಈ ಕಾಲ ಘಟ್ಟದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಅಂದರೆ ಮಕ್ಕಳ ಗೈರು ಹಾಜರಿ ತಡೆಯಲು, ಕಲಿಕೆಯ ಉತ್ಸಾಹ ಹೆಚ್ಚಿಸಲು, ಆತ್ಮಸ್ಥೈರ್ಯ ಮೈಗೂಡಿಸಲು, ವಿದ್ಯಾರ್ಥಿಗಳು ಜಗದ ವೇಗಕ್ಕೆ ಅನುಗುಣವಾಗಿ ಓಡಲು ಸ್ಪೂರ್ತಿಯಾಗಬೇಕೆಂಬುದೆ ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳುತ್ತಾ ಇಲಾಖೆ ಹಾಗೂ ಕ್ಲಸ್ಟರ್ ಶಾಲೆಗಳ ಶಿಕ್ಷಕರು ನಿರಂತರವಾಗಿ ನೀಡುವ ಸಲಹೆ ಹಾಗೂ ಸಹಕಾರವೇ ಈ ಕಾರ್ಯಕ್ರಮಕ್ಕೆ ಸ್ಫೂರ್ತಿ ಎಂಬದಾಗಿ ತಿಳಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕ ಹಿರಿಯ ಸಮಾಲೋಚಕರಾದ ಬೆಳ್ಳಶೆಟ್ಟರ ನುಡಿಗಳು ಗಮನ ಸೆಳೆದವು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಶಿಸುಬ್ರಮಣಿಯವರು ಕಾರ್ಯಕ್ರಮದ ಬಗ್ಗೆ ಅತೀವ ಸಂತಸವನ್ನು ಹಂಚಿಕೊಂಡು “ಕಲಿತ ಋಣ ಕಲಿಸಿ ಕಳೆ” ಎಂಬ ಅರ್ಥಗರ್ಭಿತ ಮಾತನಾಡಿದ್ದು ಎಲ್ಲರ ಮನ ಸೆಳೆಯಿತು. ಡಯಟ್ ಅಧಿಕಾರಿ ಸಿದ್ದೇಶ್ ಅವರು ಈ ಅಪರೂಪದ ಕಾರ್ಯಕ್ರಮ ಇತರ ಶಾಲೆಗಳಿಗೂ ಪಸರಿಸಬೇಕೆಂಬ ಸಂದೇಶವನ್ನು ಸಾರಿದರು. ರಾಜ್ಯದ ನಲಿಕಲಿ ನಿರ್ದೇಶಕ ರವೀಂದ್ರ ಅವರು ಮಾತನಾಡುತ್ತಾ, ಆ ಅದ್ಬುತ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಖುಷಿಯಲ್ಲಿ ಕರ್ನಾಟಕದ ಇತರೆ ಜಿಲ್ಲೆಗಳು ಕೂಡಾ ಇದರಿಂದ ಪ್ರೇರಣೆಯಾಗಲಿವೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿಗಳು, ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಶಿಕ್ಷಕರು, ಪೋಷಕರು, ಹೀಗೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದ ನಲಿಕಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜನಮೆಚ್ಚುಗೆ ಪಡೆಯಿತು. ಆಂಗ್ಲ ಭಾಷಾ ವ್ಯಾಮೋಹಕ್ಕೆ ಜೋತು ಬಿದ್ದಿರುವ ನಮಗೆ ಕಾನ್ವೆಂಟ್ ಶಾಲೆಗಳನ್ನೂ ಮೀರಿಸುವ ಮಕ್ಕಳ ಇಂಗ್ಲೀಷ್ ಭಾಷಣಗಳು, ಕಿರು ನಾಟಕಗಳು, ಉತ್ತಮ ಸಂದೇಶ ನೀಡುವ ನೃತ್ಯಗಳು, ಶಿಕ್ಷಕರ ಚಟುವಟಿಕೆಗಳು ಈ ಕಾರ್ಯಕ್ರಮ ಎಲ್ಲರನ್ನೂ ತನ್ನತ್ತ ಸೆಳೆಯಿತು. 4ನೇ ತರಗತಿಗೆ ಹೋಗಲಿರುವ ವಿದ್ಯಾರ್ಥಿಗಳಿ ಗಾಗಿ ಏರ್ಪಡಿಸಿದ ಸಮಾರಂಭ ಒಂಟಿಯಂಗಡಿ ಕ್ಲಸ್ಟರ್ ಶಾಲೆಗಳ ಕನಸಿನ ಕೂಸು. ಇದು ಅತ್ಯಂತ ಜೀವ ಕಳೆಯಿಂದ ರೂಪುಗೊಳ್ಳುತ್ತಲೇ ಎಲ್ಲರ ಮನ ಸೂರೆಗೊಂಡು ಮುಂದೆ ಸರ್ಕಾರಿ ಶಾಲೆಗಳ ಉಳಿವನ್ನೂ, ಗೆಲುವನ್ನೂ, ನಿತ್ಯ ಲವಲವಿಕೆಯನ್ನೂ ಅರ್ಪಣಾ ಮನಸ್ಸನ್ನೂ ಸಾಧಿಸುವ ಛಲವನ್ನು ಬಿಂಬಿಸಿತು. ಮನಸೊಂದಿದ್ದರೆಮಾರ್ಗವಿದೆ. ಸರ್ಕಾರಿ ಶಾಲೆಗಳೆಂದರೆ ಯಾರೂ ಮೂಗು ಮುರಿಯದೆ, ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು ಈ ಒಟ್ಟಾರೆ ಕಾರ್ಯಕ್ರಮ.
?ಸುನೀತ, ಶಿಕ್ಷಕಿ ರಂಗಸಮುದ್ರ.