ಸಾಂಬಾರು ಪದಾರ್ಥಗಳ ರಾಜ ಎಂದೇ ಪ್ರಖ್ಯಾತಿಯಾಗಿ ರುವ ‘‘ಕರಿಮೆಣಸು’’ ಬಹಳ ಬೇಡಿಕೆಯಿರುವ ಸಾಂಬಾರು ಪದಾರ್ಥವಾಗಿದೆ. ಈ ಬೆಳೆ ಯನ್ನು ಇದರ ಕಾಳಿಗೋಸ್ಕರ ಕೃಷಿ ಮಾಡುತ್ತಿದ್ದು, ಇದರ ಇತಿಹಾಸ ನೋಡುವುದಾದರೆ ‘‘ಕಪ್ಪು ಚಿನ್ನ’’ ಎಂದೇ ಹೆಸರಾಗಿದ್ದ ಮೆಣಸಿನಕಾಳು ಬಹಳ ಬೆಲೆಬಾಳುವ ವಾಣಿಜ್ಯ ಸಾಮಗ್ರಿಯಾಗಿತ್ತು.
ಇದನ್ನು ಹಣದ ರೂಪದಲ್ಲಿ ಬಳಸಿದ್ದೂ ಇದೆ. ಸಹ್ಯಾದ್ರಿಯ ಮೆಣಸು ಬೆಳೆ ಪಶ್ಚಿಮ ಕರಾವಳಿಯ ಹಳೆಯ ರೇವು ಪಟ್ಟಣಗಳಿಂದ ಜಗತ್ತಿನ ಮೂಲೆ-ಮೂಲೆಗಳಿಗೆ ರಫ್ತಾಗುತ್ತಿತ್ತು. ಪ್ರಾಚೀನ ರೋಮನ್ನರಿಗೆ, ಗ್ರೀಕರಿಗೆ ಭಾರತದ ಮೆಣಸಿನ ರುಚಿ ಹತ್ತಿತ್ತು. ನೇರವಾಗಿ ಭಾರತದೊಂದಿಗೆ ವ್ಯಾಪಾರ ಬೆಳಸದವರಿಗೆ ಅರಬ್ಬಿ ವರ್ತಕರು ಭಾರತದ ಮೆಣಸನ್ನು ಕೈಮುಟ್ಟಿಸುತ್ತಿದ್ದರು. ವಿಜಯನಗರದ ಅರಸರ ಕಾಲದಲ್ಲಿ ಅಮೇರಿಕೆಯ ಮೆಣಸಿನಕಾಯಿ ಭಾರತದಲ್ಲಿ ಕಾಲಿಡುವ ಮುನ್ನ ಅಡುಗೆಯಲ್ಲಿ ಖಾರಕ್ಕಾಗಿ ಮೆಣಸು, ಹಿಪ್ಪಲಿ, ಶುಂಠಿ, ಜೀರಿಗೆಗಳ ಬಳಕೆಯಾಗುತ್ತಿತ್ತು. ಭಾರತಕ್ಕೆ ಮೆಣಿಸಿನಕಾಯಿಯನ್ನು ಪರಿಚಯಿಸಿದ ಐರೋಪ್ಯರು ಮೆಣಸನ್ನು ಕೊಂಡೊಯ್ದು ಮಡಗಾಸ್ಕರ್ (ಆಫ್ರಿಕಾ ಖಂಡದ ಪೂರ್ವಕ್ಕಿರುವ ಒಂದು ದ್ವೀಪರಾಷ್ಟ್ರ, ಜಾವಾ ದ್ವೀಪ, ಸುಮಾತ್ರ, ಮಲೇಷಿಯಾ ಮುಂತಾದ ಆಗ್ನೇಯ ಏಷಿಯಾದ ಪ್ರದೇಶಗಳಲ್ಲಿ ಬೆಳೆದು ತಾವುಗಳೇ ಚೀನಾದೊಂದಿಗೆ ವ್ಯಾಪಾರಕ್ಕೆ ಮುಂದಾಗಿದ್ದರು.
ಹಾಗೆಯೇ ಕರಿಮೆಣಸಿನಿಂದ ಹಲವಾರು ಉಪಯೋಗಗಳನ್ನು ಕಾಣಬಹುದು ಮುಖ್ಯವಾಗಿ ಔಷಧಿ ತಯಾರಿಕೆಯಲ್ಲಿ, ಹೆಚ್ಚಿನ ಮಹತ್ವ ಪಡೆದಿದೆ. ಭಾರತ ದೇಶವು ಕರಿಮೆಣಸನ್ನು ಉತ್ಪಾದನೆ, ಬಳಕೆ ಹಾಗೂ ರಫ್ತು ಮಾಡುವಲ್ಲಿ ವಿಶ್ವದಲ್ಲೇ ಉತ್ತಮ ಸ್ಥಾನ ಪಡೆದಿದೆ. ಕರಿಮೆಣಸು ಉತ್ಪಾದನೆಯಲ್ಲಿ ಕೇರಳ ಮತ್ತು ಕರ್ನಾಟಕ ಶೇ.92 ರಷ್ಟು ಪಾಲನ್ನು ಹೊಂದಿ ಮೂಂಚೂಣಿಯಲ್ಲಿರುವ ರಾಜ್ಯಗಳಾಗಿವೆ. ಮತ್ತು ಇದನ್ನು ಬೆಳೆಯುವ ಪರಿ ಎಂದರೆ ಕರಿಮೆಣಿಸಿನ ಸಸಿಗಳನ್ನು ಬಳ್ಳಿಯ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡುವುದು ರೂಢಿಯಲ್ಲಿದೆ. ಬುಡದ ಭಾಗದಿಂದ ಚಿಗುರಿ ಹೊರಹೊಮ್ಮಿ ನೆಲದ ಮೇಲೆ ಹರಿದು ಹೋಗುವ ಹಂಬು ಬಳ್ಳಿಗಳನ್ನು ಡಿಸೆಂಬರ್-ಜನವರಿ ತಿಂಗಳಿನಲ್ಲಿ ಸಿಂಬೆ ಸುತ್ತಿ. ಆಧಾರವಾಗಿ ಮರಕ್ಕೆ ಅಥವಾ ಬಳ್ಳಿಯ ಪಕ್ಕದಲ್ಲಿ ಮರದ ಕಡ್ಡಿಯನ್ನು ನೆಟ್ಟು ಅದಕ್ಕೆ ಕಟ್ಟಬೇಕು. ಇದರಿಂದ ಬಳ್ಳಿಯು ನೆಲಕ್ಕೆ ಸ್ಪರ್ಶಿಸಿ, ಗೆಣ್ಣಿನಿಂದ ಬೇರು ಹೊರಹೊಮ್ಮುವುದು ನಿಯಂತ್ರಿತವಾಗುತ್ತದೆ. ಹೀಗೆ ಸಿಂಬೆ ಸುತ್ತಿದ ಬಳ್ಳಿಗಳನ್ನು ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಬೇರ್ಪಡಿಸಿದ ನಂತರ ಬಳ್ಳಿಯಲ್ಲಿರುವ ಎಲೆಗಳನ್ನು ಹಾಗೂ ಮೃದು ತುದಿ ಬಳ್ಳಿಗಳನ್ನು ಕತ್ತರಿಸಿ ತೆಗೆಯಬೇಕು.
ಬಳ್ಳಿಗಳನ್ನು 2-3 ಗೆಣ್ಣುಗಳಿರುವಂತೆ ತುಂಡುಗಳನ್ನು ಮಾಡಿ ನರ್ಸರಿ ತಾಕುಗಳಲ್ಲಿ ಅಥವಾ 2 ಭಾಗ ಮಣ್ಣು 1 ಭಾಗ ಮರಳು ಮತ್ತು 1 ಭಾಗ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ 6 ಅಥವಾ 3 ಅಂಗುಲದ ಪಾಲಿಥಿನ್ ಚೀಲದಲ್ಲಿ ತುಂಬಿ ಬೇರು ಬಿಡಲು ಬುಡದ ಕಡೆಯ ಒಂದು ಗೆಣ್ಣು ಮಣ್ಣಿನೊಳಗೆ ಇರುವಂತೆ ನೆಡಬೇಕು. ತ್ವರಿತ ಹಾಗೂ ಹೆಚ್ಚಿನ ಬೇರುಗಳನ್ನು ಭರಿಸಲು ಕಾಂಡದ ತುಂಡುಗಳ ಬುಡ ಭಾಗವನ್ನು 500 ಪಿ.ಪಿ.ಎಂ. ಸಾಮಥ್ರ್ಯದ ಇಂಡೋಲ್ ಭ್ಯೂಟ್ರಿಕ್ ಆಮ್ಲದಿಂದ ಉಪಚರಿಸಿ ನೆಡುವುದು ಒಳ್ಳೆಯದು. ಪಾಲಿಥಿನ್ ಚೀಲಗಳನ್ನು ಸಾಕಷ್ಟು ನೆರಳಿರುವ ಕಡೆ ಅಥವಾ ಹಸಿರು ಮನೆಗಳಲ್ಲಿ ಜೋಡಿಸಿ, ಮಿತವಾಗಿ ಪ್ರತಿದಿನ ನೀರು ಒದಗಿಸಬೇಕು.
ಕರಿಮೆಣಸನ್ನು ಬೆಳೆಯಬೇಕಾದರೆ ಅದಕ್ಕೆ ಸೂಕ್ತವಾದ ಸ್ಥಳವು ಅಗತ್ಯವಾಗಿರುತ್ತದೆ. ಕರಿಮೆಣಸು ತೋಟ ಮಾಡಲು ಸ್ವಲ್ಪ ಇಳಿಜಾರು ಇರುವ ಪ್ರದೇಶವನ್ನು ಆಯ್ಕೆ ಮಾಡುವುದು ವಾಡಿಕೆಯಾಗಿದೆ. ಆದರೆ ಇಳಿಜಾರು ದಿಕ್ಕು ದಕ್ಷಿಣಾಭಿಮುಖವಾಗಿದ್ದಲ್ಲಿ ಆ ಸ್ಥಳದ ಆಯ್ಕೆ ಸೂಕ್ತವಲ್ಲ. ಇಳಿಜಾರಿನ ಕೆಳಗಿನ ಅರ್ಧ ಭಾಗ ಉತ್ತರಾಭಿಮುಖವಾಗಿದ್ದು, ಇಲ್ಲವೇ ಉತ್ತರ-ಪೂರ್ವಾಭಿಮುಖವಾಗಿದ್ದಲ್ಲಿ ಅಂತಹ ಪ್ರದೇಶಗಳನ್ನು ನಾಟಿಮಾಡಲು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಇದರಿಂದ ಬೇಸಿಗೆಯಲ್ಲಿ ದಕ್ಷಿಣ-ಪಶ್ಚಿಮ ಕಡೆಯಿಂದ ಸೂಸುವ ಬಿಸಿಲಿನ ತಾಪದಿಂದ ಬಳ್ಳಿಗಳಿಗೆ ಆಗುವ ಅನಾಹುತವನ್ನು ತಪ್ಪಿಸಬಹುದು.