ಸುಂಟಿಕೊಪ್ಪ, ಜ. 23: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಪಣತೊಟ್ಟು ಪ್ರತಿ ಭಾಷಣದಲ್ಲೂ ಹೇಳುತ್ತಿದ್ದಾರೆ. ಆದರೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯವರಿಗೆ ಈ ಬಗ್ಗೆ ಯಾವುದೇ ಚಿಂತೆ ಇಲ್ಲ.

ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿಯಿಂದ ಎಮ್ಮೆಗುಂಡಿಗೆ ತೆರಳುವ ಶಿವರಾಮ ರೈ ಬಡಾವಣೆಯ ನಿವಾಸಿಗಳಿಗೆ ಕಸ ಹಾಕಲು ರಸ್ತೆ ಬದಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿಂದ ಕಸದ ತೊಟ್ಟಿ ಇಡಲಾಗಿದೆ. ಕಸದ ತೊಟ್ಟಿ ತುಂಬಿ ತುಳುಕಿ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಚೀಲಗಳು ರಸ್ತೆ ಬದಿ ಹರಿದಾಡುತ್ತಿವೆ. ನಾಯಿಗಳು, ದನಗಳು ಕಸದ ತೊಟ್ಟಿಯಲ್ಲಿರುವ ತ್ಯಾಜ್ಯ ವಸ್ತುಗಳಲ್ಲಿ ಆಹಾರ ಸಿಗಬಹುದೆಂದು ಹುಡುಕಾಡುತ್ತವೆ. ಉಲುಗುಲಿ ರಸ್ತೆಯಲ್ಲಿ ಚರಂಡಿಯಲ್ಲಿ ನೀರು ನಿಂತು ಸಂಜೆಯಾದರೆ ಸೊಳ್ಳೆಗಳ ಕಾಟ ಅಧಿಕವಾಗಿದೆ. ಇದರಿಂದ ಈ ಭಾಗದ ನಿವಾಸಿಗಳಿಗೆ, ಸಾರ್ವಜನಿಕರಿಗೆ ರೋಗ ಹರಡುವ ಲಕ್ಷಣ ಎದುರಾಗಿದೆ. ಕೂಡಲೇ ತೊಟ್ಟಿಯಲ್ಲಿ ತುಂಬಿರುವ ಕಸವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. - ರಾಜು ರೈ