ಶನಿವಾರಸಂತೆ, ಜ. 23: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಗ್ರಾಮಸಭೆಗೆ ಜಿ.ಪಂ. ಸದಸ್ಯ ಪುಟ್ಟರಾಜು ಹಾಗೂ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರುಗಳು ಸಭೆಗೆ ಬಾರದೆ ಇದ್ದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಬಹಿಷ್ಕಾರ ಹಾಕುವುದಾಗಿ ಸುಲೈಮಾನ್, ಕಂದಾ ಹಾಗೂ ಇತರರು ಸರ್ವಾನುಮತದಿಂದ ಖಂಡನಾ ನಿರ್ಣಯ ಕೈಗೊಂಡು ಸಭೆಯಿಂದ ಹೊರ ನಡೆದ ಪ್ರಸಂಗ ನಡೆಯಿತು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಗ್ರಾಮಸಭೆ ಒಂದು ಗಂಟೆ ತಡವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಸುಂದರ್ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ಸಭೆಗೆ ಜಿ.ಪಂ. ಸದಸ್ಯ ಪುಟ್ಟರಾಜು ಹಾಗೂ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ ಅವರುಗಳು ಗೈರು ಹಾಜರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿತು. ಚುನಾವಣೆಯಲ್ಲಿ ಆಯ್ಕೆ ಆದ ಬಳಿಕ ಈ ಇಬ್ಬರು ಜನಪ್ರತಿನಿಧಿಗಳಿಂದ ಯಾವದೇ ಅಭಿವೃದ್ಧಿ ಕೆಲಸಗಳಾಗಿಲ್ಲ ವೆಂದು ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಹೊರ ನಡೆದರು. ಆಡಳಿತ ಮಂಡಳಿಯವರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಸಭಾತ್ಯಾಗ ಮಾಡಿದವರ ಮನವೊಲಿಸಿ ಮರಳಿ ಕರೆತಂದ ಬಳಿಕ ಸಭೆ ಮುಂದುವರಿಯಿತು.

ಕೊಡ್ಲಿಪೇಟೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ ಮತ್ತು ಪಶುಗಳ ಆಸ್ಪತ್ರೆಯಲ್ಲಿ ಖಾಯಂ ವೈದ್ಯಾಧಿ ಕಾರಿಗಳು ಇಲ್ಲದಿರುವ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ನೋಡಲ್ ಅಧಿಕಾರಿಗಳ ಮುಖಾಂತರ ವರದಿ ಕಳುಹಿಸುವಂತೆ ಗ್ರಾಮಸ್ಥರಾದ ಹನೀಫ್ ಒತ್ತಾಯಿಸಿದರು.

ಅಪಾಯದ ಸ್ಥಿತಿಯಲ್ಲಿರುವ ರಸ್ತೆ ಬದಿಯಲ್ಲಿರುವ ಮರಗಳಿಂದ ಮನೆ ಹಾಗೂ ಜನರಿಗೆ ಮಳೆ-ಗಾಳಿಯಿಂದ ತೊಂದರೆಯಾಗುವುದರಿಂದ ಆದಷ್ಟು ಬೇಗ ತೆರವುಗೊಳಿಸಲು ಅರಣ್ಯಾಧಿ ಕಾರಿಗಳಿಗೆ ಒತ್ತಾಯಿಸಲಾಯಿತು.

ಬ್ಯಾಡಗೊಟ್ಟ ಪಂಚಾಯಿತಿ ಸಮೀಪದ ಶಾಲೆ ಹಾಗೂ ಸುತ್ತಮುತ್ತ ವಾಸವಾಗಿರುವ (50 ವರ್ಷಗಳಿಂದ) ಮನೆಗಳಿಗೆ 94ಸಿ ಯಡಿಯಲ್ಲಿ ಸಲ್ಲಿಸಿದ ಹಕ್ಕುಪತ್ರದ ಅರ್ಜಿಗಳು ತಿರಸ್ಕಾರ ವಾಗಿರುವ ಬಗ್ಗೆ ಕಂದಾಯಾಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.

14ನೇ ಹಣಕಾಸಿನ ಕ್ರಿಯಾ ಯೋಜನೆ ಪಟ್ಟಿ ತಯಾರಾಗಿ ತಾಲೂಕು ಅನುಮೋದನೆ ಪಡೆಯಲು ಕಳುಹಿಸಿ 3-4 ತಿಂಗಳು ಕಳೆದರೂ ಕೂಡ ಅನುಮೋದನೆ ಯಾಗಿ ಬಂದಿರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರೇಣುಕಾ ಮೇದಪ್ಪ, ಬಿ.ಕೆ. ದಿನೇಶ್, ಸಾವಿತ್ರಿ, ಶಣ್ಮುಖಯ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಡಗೊಟ್ಟ ಪಂಚಾಯಿತಿ ವ್ಯಾಪ್ತಿಯ ಕ್ಯಾತೆ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರದಲ್ಲಿ ಮಾಂಸ ಸೇರಿದಂತೆ ದಿನಸಿ ವಸ್ತುಗಳು ಖರೀದಿ ಸುವುದಕ್ಕೂ, ಲೆಕ್ಕ ಬರೆದಿರುವುದಕ್ಕೂ ವ್ಯತ್ಯಾಸ ಕಂಡು ಬಂದಿದ್ದು, ಇದರಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆಯಿ ರುವುದರಿಂದ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಆಡಳಿತ ಮಂಡಳಿ ಸದರಿ ಶಾಲೆಗೆ ತೆರಳಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೇದಕುಮಾರ್ ಗಂಭೀರವಾಗಿ ಪ್ರಸ್ತಾಪಿಸಿದರು.

ಗ್ರಾಮ ಪಂಚಾಯಿತಿಯಿಂದ ನಿಗದಿಪಡಿಸಿರುವ ಮನೆ ಕಂದಾಯ ಅವೈಜ್ಞಾನಿಕವಾಗಿದ್ದು, ಇದನ್ನು ಸರಿಪಡಿಸಬೇಕು, ಮನೆ ತೆರಿಗೆ ನಿಗದಿ ಮಾಡಲು ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಮನೆ ಅಳತೆ ಮಾಡದೆ ಸಾವಿರಾರು ರೂಪಾಯಿ ನಿಗದಿ ಮಾಡಿರುವ ಬಗ್ಗೆ ಸಾರ್ವಜನಿಕರು ಖಂಡಿಸಿದರು.

ಸಭೆಯಲ್ಲಿ ಗ್ರಾಮಸ್ಥರಾದ ಅಬ್ಬಾಸ್, ಜಾನ್, ಮೇದಪ್ಪ, ಗಣೇಶ್, ಹನೀಫ್, ಸುಲೈಮಾನ್ ಹಾಗೂ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷ ಬಿ.ಎ. ಅಹಮದ್, ಸದಸ್ಯರುಗಳಾದ ಸಾವಿತ್ರಿ ಕುಮಾರ್, ಗೌರಮ್ಮ ದೊಡ್ಡಯ್ಯ, ಹೇಮಾವತಿ ಈರಪ್ಪ, ರೇಣುಕಾ ಮೇದಪ್ಪ, ಕೇಶವ, ಬಿ.ಕೆ. ದಿನೇಶ್, ಕೆ.ಎಸ್. ಷಣ್ಮುಖಯ್ಯ, ಪಿಡಿಓ ಹರೀಶ್, ನೋಡಲ್ ಅಧಿಕಾರಿ ಅಯಿಶ್‍ತ್ತಮುಷ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸ್ವಾಗತಿಸಿ, ವಂದಿಸಿದರು.