ಮೂರ್ನಾಡು, ಜ. 23: ಗುರು-ಶಿಷ್ಯರ ಬಾಂಧವ್ಯ ಅನನ್ಯವಾದುದು. ವಿದ್ಯಾರ್ಥಿಗಳು ತಮಗೆ ದಾರಿ ತೋರಿಸಿದ ಶಿಕ್ಷಕರ ಬಗ್ಗೆ ಪೂಜ್ಯ ಭಾವನೆ ಇಟ್ಟು ಗೌರವದಿಂದ ಕಾಣಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ ಹೇಳಿದರು.

ಮೂರ್ನಾಡು ಪ್ರೌಢಶಾಲೆಯಲ್ಲಿ 1993-95ರ ಸಾಲಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಪ್ರಕೃತಿ ರಶ್ಮಿ ವಾಟ್ಸಪ್ ಕೂಟದಿಂದ ಏರ್ಪಡಿಸಲಾಗಿದ್ದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗೆ ಗೌರವ ನೀಡಿ ಪೂಜ್ಯ ಭಾವನೆಯಿಂದ ಮಾತನಾಡಿಸಿ ದಾಗ ಶಿಕ್ಷಕ ವೃತ್ತಿಯಿಂದ ಜನ್ಮ ಸಾರ್ಥಕವಾಯಿತು ಎಂದೆನಿಸುತ್ತದೆ. ಶಿಕ್ಷಕರಿಗೆ ಅದುವೇ ಸಂತೃಪ್ತಿ, ಸಂತೋಷನ್ನು ತಂದುಕೊಡುತ್ತದೆ. ನೆನಪುಗಳನ್ನು ಮೆಲುಕು ಹಾಕುವುದು ವಿಶೇಷ ನೆಮ್ಮದಿಯನ್ನು ತರುತ್ತದೆ ಎಂದರು. ಸಮಾರಂಭದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಹಿರಿಯ ಶಿಕ್ಷಕ ಎಸ್.ಡಿ. ಪ್ರಶಾಂತ್, ಹೆಚ್.ಬಿ. ಕೃಷ್ಣಪ್ಪ ಹಾಗೂ ನಿವೃತ್ತ ಯೋಧ ಮತ್ತು ಹಳೆ ವಿದ್ಯಾರ್ಥಿ ಬಿ.ಕೆ. ಕೇಶವ ಅವರನ್ನು ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು.

ಹಳೆಯ ವಿದ್ಯಾರ್ಥಿಗಳಾದ ಬಾಲಕೃಷ್ಣ, ರೂಪಶ್ರೀ, ಕೇಶವ, ಹಮೀದ್, ವಿದ್ಯಾರ್ಥಿ ಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸವಿನೆನಪಿಗಾಗಿ ಹಳೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು.