ಮಡಿಕೇರಿ, ಜ. 23: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ 12ನೇ ವರ್ಷದ ವಧು-ವರರ ಸಮಾವೇಶ ಫೆ. 9 ರಂದು ಮಡಿಕೇರಿಯಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಅವರು, ಅರೆಭಾಷೆ ಗೌಡ ಜನಾಂಗದವರಿಗೆ ಸೀಮಿತವಾಗಿ ಈ ಸಮಾವೇಶ ಆಯೋಜಿಸ ಲಾಗುತ್ತಿದ್ದು, ಅಂದು ಪೂರ್ವಾಹ್ನ 9.30 ಗಂಟೆಯಿಂದ ನಗರದ ಕೊಡಗು ಗೌಡ ವಿದ್ಯಾ ಸಂಘ (ಮೇಲಿನ ಗೌಡ ಸಮಾಜ)ದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ವಧು-ವರರ ಸಮಾವೇಶಕ್ಕೆ ಜನಾಂಗ ಬಾಂಧವರಿಂದ ಉತ್ತಮ ಸ್ಪಂದನ ದೊರಕುತ್ತಿದ್ದು, ಜನಾಂಗದ ವಧು ಹಾಗೂ ವರರು ತಮಗೆ ಬೇಕಾದ ಜೋಡಿಯನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.

ಈಗಾಗಲೇ 45ಕ್ಕೂ ಅಧಿಕ ಜೋಡಿಗಳು ಈ ಸಮಾವೇಶಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಈ ಬಾರಿಯ ಸಮಾವೇಶದಲ್ಲಿ ಸುಮಾರು 70ಕ್ಕೂ ಅಧಿಕ ವಧು-ವರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಭಾಗವಹಿಸುವ ವಧು ಹಾಗೂ ವರ ತಮ್ಮ ಭಾವಚಿತ್ರ ಹಾಗೂ ಇತರ ಎಲ್ಲಾ ಮಾಹಿತಿ ಗಳೊಂದಿಗೆ ಭಾಗವಹಿಸಬೇಕು. ವೇದಿಕೆಯಲ್ಲಿ ತಮ್ಮ ವಿವರಗಳನ್ನು ತಿಳಿಸಿದ ಬಳಿಕ ಆ ವಧು- ಅಥವಾ ವರನನ್ನು ಆಯ್ಕೆ ಮಾಡುವ ಹುಡುಗ ಅಥವಾ ಹುಡುಗಿ ತಮ್ಮ ಮಾಹಿತಿಯನ್ನು ತಿಳಿಸುವುದರೊಂದಿಗೆ ವಧು-ವರರ ಆಯ್ಕೆ ನಡೆಯುತ್ತದೆ. ಆಸಕ್ತರು ಮುಂಚಿತವಾಗಿ ಅಥವಾ ಅದೇ ದಿನದಂದು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ವಿವರಿಸಿದರು. ಅಲ್ಲದೆ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9663725152 ಅಥವಾ 990050 0080ನ್ನು ಸಂಪರ್ಕಿಸಬಹುದೆಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕುದ್ಪಜೆ ಭೋಜಪ್ಪ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ, ನಿರ್ದೇಶಕರಾದ ಪೊನ್ನಚನ ಸೋಮಣ್ಣ, ಪಾಣತ್ತಲೆ ಬಿದ್ದಪ್ಪ ಹಾಗೂ ಕರ್ಣಯ್ಯನ ನಾಗೇಶ್ ಉಪಸ್ಥಿತರಿದ್ದರು.