ವೀರಾಜಪೇಟೆ, ಜ. 23: ಜಿಲ್ಲೆಯಾದ್ಯಂತ ಸುಮಾರು 374 ಮೃತ ದೇಹಗಳನ್ನು ನೀರಿನಿಂದ ಹೊರಕ್ಕೆ ತೆಗೆದು ಸಾಧನೆಗೈದ ವೀರಾಜಪೇಟೆ ಚಿಕ್ಕಪೇಟೆಯ ನಿವಾಸಿ ಕೆ.ಪಿ. ಸಿದ್ಧಲಿಂಗಸ್ವಾಮಿ ಅವರನ್ನು ವೀರಾಜಪೇಟೆ ಹಾಗೂ ಅಮ್ಮತ್ತಿ ಲಯನ್ಸ್ ಕ್ಲಬ್‍ಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸನ್ಮಾನಿಸಿ, ಸಹಾಯ ಹಸ್ತ ನೀಡಿ ಗೌರವಿಸಲಾಯಿತು.

ಇತ್ತೀಚಿಗೆ ವೀರಾಜಪೇಟೆ ಲಯನ್ಸ್ ಕ್ಲಬ್‍ಗೆ ರೀಜಿನಲ್ ಛೇರ್ಮನ್ ಎಂ.ಜೆ.ಎಫ್. ಸೋಮಣ್ಣ ಅವರು ಅಧಿಕೃತ ಭೇಟಿ ಸಂದರ್ಭದಲ್ಲಿ 1974 ರಿಂದಲೂ ಮುಳುಗು ತಜ್ಞನಾಗಿ ಸೇವೆ ಸಲ್ಲಿಸಿ 72 ರ ವಯಸ್ಸಿನಲ್ಲಿಯೂ ಈ ಕಾರ್ಯ ಮುಂದುವರೆಸಿ ರುವುದನ್ನು ಲಯನ್ಸ್ ಸಂಸ್ಥೆ ಶ್ಲಾಘಿಸಿತು.

ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಪೌಲ್ ಕ್ಷೇವಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಪೊನ್ನಪ್ಪ, ಕಾರ್ಯದರ್ಶಿ ಸವಿತಾ, ಖಜಾಂಚಿ ರಕ್ಷಿತಾ, ಲಯನೆಸ್‍ನ ಸೋನಿ ಪೌಲ್, ಮಂಡೇಪಂಡ ಸುರೇಶ್, ಎ.ಎ. ಅಜಿತ್, ತ್ರಿಶು ಗಣಪತಿ ಹಾಜರಿದ್ದರು.

ಮಳೆಯಿಂದ ದುರಂತ ಕ್ಕೊಳಗಾದವರು, ಜಲಸಮಾಧಿ, ನೆರೆ ಹಾವಳಿಯಿಂದ ಕೊಚ್ಚಿ ಹೋದ ದುರ್ದೈವಿಗಳು, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದವರು, ನೀರಿ ನಿಂದ ಭರ್ತಿಯಾದ ಹೊಳೆಯಲ್ಲಿ ಮುಳುಗಿದ ಮೃತದೇಹಗಳನ್ನು ಸಿದ್ಧಲಿಂಗ ಸ್ವಾಮಿ ನೀರಿನಿಂದ ಮೇಲಕ್ಕೆತ್ತಿರುವ ದಾಖಲೆಗಳಿವೆ.

ಕೆಲವು ಸಂದರ್ಭದಲ್ಲಿ ಪೊಲೀಸರು ಸಾಹಸದಿಂದ ಮೃತದೇಹವನ್ನು ನೀರಿನಿಂದ ತೆಗೆಯಲಾರದೆ ವಿಫಲಗೊಂಡ ಸಂದರ್ಭದಲ್ಲಿಯೂ ಸಿದ್ಧಲಿಂಗ ಸ್ವಾಮಿ ಮೃತದೇಹಗಳನ್ನು ಹೊರಕ್ಕೆ ತೆಗೆದ ಪ್ರಕರಣಗಳಿವೆ.