ಮತದಾನ ಎಂಬದು ಅಖಂಡ ಪ್ರಜಾ ಸಮೂಹದ ದನಿ. ಪ್ರತಿ ಪ್ರಜೆಯೂ ತನ್ನನ್ನು ಆಯ್ಕೆ ಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತನ್ನು ಮಾಡುವ ನಾಯಕನನ್ನು ಚುನಾಯಿಸುವುದು ಪ್ರಜೆಗಳ ಜವಾಬ್ದಾರಿ. ಮತದಾನದ ಪ್ರಾಮಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಗಳ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ನಮ್ಮ ದೇಶದಲ್ಲಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
ಹಿಂದೆ ರಾಜರ ಆಳ್ವಿಕೆಯ ಸಮಯದಲ್ಲಿ ತಮ್ಮ ರಾಜನನ್ನು ಆರಿಸಿ ಕೊಳ್ಳುವ ಅವಕಾಶ ಪ್ರಜೆಗಳಿಗೆ ಇರಲಿಲ್ಲ. ರಾಜ್ಯ ರಾಜ್ಯಗಳ ನಡುವಿನ ಕಲಹದಿಂದಾಗಿ ಆಗಾಗ ಬದಲಾಗುವ ರಾಜರಿಂದ ಜನ ಸಾಮಾನ್ಯನಿಗೆ ತನ್ನ ರಾಜ ಯಾರು ತಾವು ಯಾವ ರಾಜ್ಯಕ್ಕೆ ಒಳಪಟ್ಟಿದ್ದೇವೆ ಎಂಬ ಪರಿವೆಯೂ ಇರುತ್ತಿರಲಿಲ್ಲ. ರಾಜಕೀಯ ವಿಚಾರದಲ್ಲಿ ಅಷ್ಟರ ಮಟ್ಟಿಗೆ ಪ್ರಜೆ ಕಡೆಗಣಿಸಲ್ಪಟ್ಟಿದ್ದ. ನಂತರದಿಂದ ಬ್ರಿಟಿಷರ ಆಳ್ವಿಕೆಯಲ್ಲಿಯು ಇದೇ ಪರಿಸ್ಥಿತಿ ಮುಂದುವರೆದಿತ್ತು. ಭಾರತೀಯ ಪ್ರಜೆಗಳು ಕಡೆಗಣಿಸಲ್ಪಟ್ಟರು. ಆದರೆ ಯಾವಾಗ ನಮ್ಮ ದೇಶ ತನ್ನದೇ ಆದ ಸಂವಿಧಾನವನ್ನು ಜಾರಿಯಲ್ಲಿ ತಂದಿತೋ ಆಗಲೆ ಭಾರತೀಯ ಪ್ರಜೆ ನಿಜವಾದ ಸ್ವಾತಂತ್ರ್ಯ ಪಡೆದ. ಜನತಂತ್ರ ವ್ಯವಸ್ಥೆಯಿಂದಾಗಿಯೇ ಪ್ರತಿ ಪ್ರಜೆಗೂ ಬೆಲೆ ಬಂತು. ಪ್ರಜೆಗಳ ನಿರ್ಣಯಕ್ಕೆ ಗೌರವ ಸಿಕ್ಕಿತ್ತು. ಅದೆಲ್ಲವು ಸಾಧ್ಯವಾಗಿದ್ದು ಮತದಾನ ಎಂಬ ಸಂವಿಧಾನದ ಒಂದು ಪ್ರಮುಖ ಅಂಗದ ಮೂಲಕವೇ 2011ರಿಂದ ನಮ್ಮ ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಜ.25ನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣವಿದೆ. ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡಿದ್ದು 1950 ಜನವರಿ 25ನೇ ದಿನಾಂಕದಂದು. ಹಾಗಾಗಿ ಇದೇ ದಿನದಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲು ಸರ್ಕಾರ ನಿರ್ಧರಿಸಿತ್ತು.
18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳು ಚುನಾವಣಾ ಸಂದÀರ್ಭದಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ ಗ್ರಾಮೀಣ ಪ್ರದೇಶಗಳಂತೆ ನಗರ ಪ್ರದೇಶದಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತದೆ ವಿದ್ಯಾವಂತರೇ ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ಕಡೆಗಣಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ ಜನತೆ ಹೆಚ್ಚು ಹೆಚ್ಚು ವಿದ್ಯಾವಂತರಾದಂತೆ ಮತದಾನ ಕಡೆ ನಿರ್ಲಕ್ಷ್ಯಧೋರಣೆ ತೋರುತ್ತಿದ್ದಾರೆ.
ತಮ್ಮ ನಾಯಕರ ಭ್ರಷ್ಟಾಚಾರ ಆಳುವ ಜನರಿಂದಲೇ ನಡೆಯುತ್ತಿರುವ ಲೂಟಿ, ಅನಾಚಾರ ಮುಂತಾದವುಗಳು ವಿಚಾರವಂತ ಪ್ರಜೆಗಳಲ್ಲಿ ಮತದಾನ ಚುನಾವಣೆ ಕುರಿತು ಆಸಕ್ತಿಯನ್ನು ಕುಂದಿಸಿರಬಹುದು ಆದರೆ ದೇಶವನ್ನು ಬದಲಾಯಿಸುವ ಶಕ್ತಿ ಪ್ರಜೆಗಳ ಕೈಯಲ್ಲೇ ಇದೆ. ಅರ್ಹ ಪ್ರತಿನಿಧಿಯನ್ನು ಚುನಾಯಿಸಿ ದೇಶದಲ್ಲಿ ನ್ಯಾಯಪರ ಸರಕಾರವನ್ನು ಜಾರಿಗೆ ತರುವ ಜವಾಬ್ದಾರಿ ಪ್ರಜೆಗಳ ಮೇಲಿದೆ ಎಂಬುದನ್ನು ಯಾವ ಪ್ರಜೆಯೂ ಮರೆಯಬಾರದು. ಹಲವು ಆಮಿಷಗಳಿಗೆ ಮಾತದಾರರನ್ನು ಸೆಳೆದು ಗೆದ್ದು ಬೀಗುವ ಪ್ರಯತ್ನ ಅಭ್ಯರ್ಥಿಗಳಿಂದ ನಡೆಯುತ್ತದೆ ಚುನಾವಣೆ ಹತ್ತಿರ ಬರುತ್ತಿರುವಾಗ, ಆಶ್ವಾಸನೆಗಳೂ ಹೆಚ್ಚುತ್ತಾ ಹೋಗುತ್ತವೆ. ಚುನಾವಣಾ ಪ್ರಚಾರಕ್ಕಾಗಿ ನಾನಾ ಪಕ್ಷಗಳಿಂದ ಏನೇ ಕಾರ್ಯಕ್ರಮಗಳು ನಡೆದರೂ ಮತದಾರರ ನಿಲುವು ಮಾತ್ರ ನಿರ್ದಿಷ್ಟವಾಗಿರಬೇಕು ಜಾತಿ, ಧರ್ಮ, ಮೀರಿದ ನಿಜವಾದ ಒಳಿತಿಗೆ ಪರೋಕ್ಷವಾಗಿ ಮತದಾರರೇ ಕಾರಣ ರಾಗುತ್ತಾರೆ ಎಂಬುವುದು ಪ್ರತಿ ಮತದಾರರ ಗಮನದಲ್ಲಿರಬೇಕು.
ಮತದಾನ ಪ್ರಕ್ರಿಯೆಯಿಂದ ಅರಿವಿದ್ದು, ದೂರ ಉಳಿಯುವ ವಿದ್ಯಾವಂತರನ್ನು ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನ ಪವಿತ್ರ್ಯತೆಯ ಬಗ್ಗೆ ಅರಿವು ಮೂಡಿಸುವುದು, 18 ವರ್ಷ ತುಂಬಿದ ವಯಸ್ಕರಲ್ಲಿ ಮತದಾನದ ಹಕ್ಕು ಪಡೆಯುವಂತೆ ಸ್ಪೂರ್ತಿನೀಡುವುದು, ಪ್ರಜೆಗಳ ಹಕ್ಕಿನ ಕುರಿತು ಜಾಗೃತಿ ಮೂಡಿಸುವುದು. ರಾಷ್ಟ್ರೀಯ ಮತದಾರರ ದಿನದ ಉದ್ದೇಶ, ಮತದಾರರಿಗೆ ಪ್ರಜಾಪ್ರಭುತ್ವದ ಅಗತ್ಯತೆ ಅನಿವಾರ್ಯತೆಯನ್ನು ಒತ್ತಿಹೇಳಿ ಪ್ರಬುದ್ಧ ಮತದಾರರಿಗೆ ಕಾರ್ಯನಿರ್ವಹಿಸುವಂತೆ ಉತ್ತೇಜಿಸುವುದು ಈ ದಿನಾಚರಣೆಯ ಗುರಿ .
ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಪ್ರಜೆಗಳೂ ಮತದಾನ ಮಾಡಿ ನಾಯಕರ ಆಯ್ಕೆಯ ಜವಾಬ್ದಾರಿಯನ್ನು ಸೂಕ್ತರೀತಿಯಲ್ಲಿ ನಿಭಾಯಿಸಲು ಪ್ರತಿಜ್ಞೆ ಮಾಡುವುದರ ಮೂಲಕ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಬೇಕಿದೆ.
-ನಿರ್ಮಲ ಪೂವಯ್ಯ ssssss
ಸಹಾಯಕ ಪ್ರಾಧ್ಯಾಪಕರು ರಾಜ್ಯಶಾಸ್ತ್ರ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು
ಮಡಿಕೇರಿ.