ಗೋಣಿಕೊಪ್ಪಲು, ಜ.23: ಕರ್ನಾಟಕ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆಯ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಅರಣ್ಯದಂಚಿನಲ್ಲಿ ಕಾಡ್ಗಿಚ್ಚು ಜಾಗೃತಿ ಅಭಿಯಾನಕ್ಕೆ ಚೆನ್ನಯ್ಯನಕೋಟೆ ಸರ್ಕಾರಿ ಶಾಲಾ ಆವರಣದಿಂದ ಅಲ್ಲಿನ ಗ್ರಾ.ಪಂ.ಅಧ್ಯಕ್ಷೆ ಕೆ.ಸಿ.ಗೀತಾ ಅವರು ಚಾಲನೆ ನೀಡಿದರು.

ಚೆನ್ನಯ್ಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಕಾಡ್ಗಿಚ್ಚು ದುಷ್ಪರಿಣಾಮದ ಕುರಿತಾದ ಕರಪತ್ರವನ್ನು ಹಂಚುವ ಮೂಲಕ ಅಭಿಯಾನ ಆರಂಭಗೊಂಡಿತು. ಅರಣ್ಯದಿಂದ ಮನುಷ್ಯನಿಗೆ ಉಸಿರಾಡಲು ಗಾಳಿ,ನೀರು, ಆಹಾರ ಹಾಗೂ ಔಷಧಿಯ ಮಹತ್ವ, ಕಾಡು ಬೆಳೆಸಲು ಇರುವೆಯಿಂದ ಆನೆಯವರೆಗೂ ಇರುವ ಉಪಯೋಗ. ಕಾಡ್ಗಿಚ್ಚು ಉಂಟಾದಲ್ಲಿ ಅಂತರ್ಜಲ ಮಟ್ಟದ ಕುಸಿತ ಒಳಗೊಂಡಂತೆ ಜನ, ಜಾನುವಾರುಗಳು, ವನ್ಯಪ್ರಾಣಿ ಗಳಿಗಾಗುವ ನಷ್ಟದ ಕುರಿತು ಕಾರ್ಯಕ್ರಮ ಸಂಯೋಜಕರಾದ ಟಿ.ಎಲ್.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಅವರ ನೇತೃತ್ವದಲ್ಲಿ ತಿತಿಮತಿ, ದೇವಮಚ್ಚಿ ಅರಣ್ಯ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸರಹದ್ದು, ಇರ್ಪು, ಬೀರುಗ, ಬಿರುನಾಣಿ ವ್ಯಾಪ್ತಿಯ ಬೃಹ್ಮಗಿರಿ ವನ್ಯ ಜೀವಿ ವಲಯದ ಸರಹದ್ದಿನ ಎಲ್ಲ ಶಾಲೆಗಳಲ್ಲಿಯೂ ಮೊದಲ ಹಂತದ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಇಂದು ಚೆನ್ನಯ್ಯನಕೋಟೆ, ದಿಡ್ಡಳ್ಳಿ,ಗುಡ್ಲೂರು, ಮಾಲ್ದಾರೆ, ಘಟ್ಟದಳ, ಪಾಲಿಬೆಟ್ಟ ಒಳಗೊಂಡಂತೆ ಸುಮಾರು 13 ಶಾಲೆಗಳಲ್ಲಿ ಕಾಡ್ಗಿಚ್ಚಿನ ದುಷ್ಪರಿಣಾಮ ಕುರಿತು ಅರಿವು ಮೂಡಿಸಲಾಯಿತು.

ಮಾಲ್ದಾರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಡಿನ ಬೆಂಕಿಯ ಅಗಾಧತೆ, ಸವಾಲುಗಳ ಕುರಿತು ದೇವಮಚ್ಚಿ ಅರಣ್ಯ ವಲಯದ ಅರಣ್ಯ ರಕ್ಷಕ ಎಂ.ಜೆ.ಮಣಿಕಂಠ ಅವರು ಬೇಸಿಗೆಯಲ್ಲಿ ಕೈಗೊಳ್ಳುವ ಬೆಂಕಿ ರೇಖೆ ಕಾರ್ಯಕ್ರಮ, ಬೆಂಕಿ ಪ್ರಕರಣದ ಸಂದರ್ಭ ಉಂಟಾಗುವ ಹಾನಿ ಹಾಗೂ ಸಾರ್ವಜನಿಕರು, ವಿದ್ಯಾರ್ಥಿಗಳ ಸಹಕಾರ ಕುರಿತು ಮಾಹಿತಿ ನೀಡಿದರು.

ದೇವಮಚ್ಚಿ ಆಶ್ರಮ ಶಾಲೆ, ಪಾಲಿಬೆಟ್ಟ ನಮ್ಮ ಪ್ರೌಢಶಾಲೆ, ಪಾಲಿಬೆಟ್ಟ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳಿಗೆ ಕರಪತ್ರ ವಿತರಿಸಲಾಯಿತು.

ಚೆನ್ನಯ್ಯನ ಕೋಟೆ ಕಾರ್ಯಕ್ರಮದಲ್ಲಿ ಅಲ್ಲಿನ ಗ್ರಾ.ಪಂ.ಅಧ್ಯಕ್ಷೆ ಗೀತಾ, ಪಿಡಿಓ ಆರ್.ರಾಜನ್, ಸರ್ಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಯರಾದ ರವಿಚಂದ್ರನ್, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗ್ಲಾಡಿ ಸಿಕ್ವೇರಾ, ಸ್ಕೌಟ್ಸ್ ಮತ್ತು ಗೈಡ್ಸ್ ನಿರ್ದೇಶಕಿ ಬಿ.ಬಿ.ಜಾಜಿ, ಚಿತ್ರಾ ಟಿ.ಎಸ್., ಪವಿತ್ರಾ, ಶೈಲಾ, ರೀಜಾ ಉಪಸ್ಥಿತರಿದ್ದರು. ಶಿಲ್ಪಾ ಸ್ವಾಗತಿಸಿ, ವಂದಿಸಿದರು.

ಮಾಲ್ದಾರೆ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕಿ ಕೆ.ಯು.ಗಂಗಮ್ಮ ವಿದ್ಯಾರ್ಥಿಗಳಿಗೆ ಕಾಡಿನ ಬೆಂಕಿ ಅನಾಹುತ, ವನ್ಯಪ್ರಾಣಿಗಳ ಮಹತ್ವ ಕುರಿತು ವಿವರಿಸಿದರು.ಅರಣ್ಯ ರಕ್ಷಕ ಹನುಮಂತ ರಾಯಪ್ಪ, ಶಿಕ್ಷಕರಾದ ಈಶ್ವರಿ, ಪ್ರತಿಮಾ, ಧನ್ಯ, ಶರೀಫ್ ಮುಂತಾದವರು ಉಪಸ್ಥಿತರಿದ್ದರು.