ಸೋಮವಾರಪೇಟೆ,ಜ.21: ಸೋಮವಾರಪೇಟೆ ಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರು ಮತ್ತು ಮಡಿಕೇರಿ ರಸ್ತೆಯಿಂದ ಸೋಮವಾರ ಪೇಟೆಗೆ ಆಗಮಿಸುತ್ತಿದ್ದ ಶಾಲಾ ವಾಹನದ ಮಧ್ಯೆ ಢಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಹೆಚ್ಚಿನ ದುರಂತ ತಪ್ಪಿದೆ. ಇಂದು ಸಂಜೆ 5.30ರ ಸುಮಾರಿಗೆ ಐಗೂರು ಸಮೀಪದ ಹೊಸತೋಟ ಗ್ರಾಮದ ರಾಜ್ಯ ಹೆದ್ದಾರಿಯ ತಿರುವಿನಲ್ಲಿ ಅವಘಡ ಸಂಭವಿಸಿದ್ದು, ಕಾರಿನ ಚಾಲಕ ಮದ್ಯಪಾನ ಮಾಡಿ, ಅಜಾಗರೂಕತೆ ಯಿಂದ ಕಾರು ಚಾಲಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ಮಡಿಕೇರಿಯ ಕೇಂದ್ರಿಯ ವಿದ್ಯಾಲಯಕ್ಕೆ ಸೇರಿದ ಶಾಲಾ ವಾಹನ (ಕೆ.ಎ.12 ಬಿ. 7979) ಮತ್ತು ಮಡಿಕೇರಿಯ ಸುಮನ್ ಮುದ್ದಯ್ಯ ಕೆ.ಎಸ್. ಎಂಬವರಿಗೆ ಸೇರಿದ ಕ್ವಿಡ್ ಕಾರು (ಕೆ.ಎ.12 ಎಂ.ಎ.6043) ನಡುವೆ, ಢಿಕ್ಕಿ ಸಂಭವಿಸಿದೆ.

ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ 5 ವಿದ್ಯಾರ್ಥಿಗಳನ್ನು ಐಗೂರಿಗೆ ಕರೆತರುತ್ತಿದ್ದ ಸಂದರ್ಭ, ಅಜಾಗರೂಕತೆಯ ಚಾಲನೆ ಮಾಡುತ್ತಿದ್ದ ಕಾರು ಚಾಲಕ ಸುಮನ್, ಹೊಸತೋಟದ ತಿರುವಿನಲ್ಲಿ ಶಾಲಾ ವಾಹನಕ್ಕೆ ಢಿಕ್ಕಿಪಡಿಸಿದ್ದಾನೆ. ಘಟನೆಯಿಂದ ಕಾರಿನ ಮುಂಭಾಗ ಜಖಂಗೊಂಡಿದ್ದು, ಬಲಭಾಗದ ಚಕ್ರ ಕಳಚಿಕೊಂಡು ರಸ್ತೆಯ ಮಧ್ಯೆಯೇ ಬಿದ್ದಿದೆ. ಅದೃಷ್ಟವಶಾತ್ ಶಾಲಾ ವಾಹನದಲ್ಲಿದ್ದ ವಿದ್ಯಾರ್ಥಿಗಳು, ಚಾಲಕನಿಗೆ ಯಾವದೇ ತೊಂದರೆಯಾಗಿಲ್ಲ. ಶಾಲಾ ವಾಹನ ಚಾಲಕ ಗರಗಂದೂರಿನ ರಾಜು ಅವರು ಘಟನೆಯ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.