ನಾಪೋಕ್ಲು, ಜ. 21: ಪಟ್ಟಣದ ಲಾಡ್ಜ್‍ವೊಂದರಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಅಸ್ಸಾಂ ಮೂಲದ ಕಾರ್ಮಿಕರು ಬೀಡುಬಿಟ್ಟಿದ್ದು, ಕೆಲವರು ಲಾಡ್ಜ್‍ಗೆ ತೆರಳಿ ದಾಖಲಾತಿಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆನ್ನ ಲಾಗಿದೆ. ಈ ಸಂದರ್ಭ ಸ್ಥಳಕ್ಕಾಗಮಿಸಿದ ಮತ್ತೊಂದು ಗುಂಪು ಲಾಡ್ಜ್‍ನಲ್ಲಿ ತಂಗಿರುವ ಅಸ್ಸಾಂ ಮೂಲದ ಕಾರ್ಮಿಕರ ಬಗ್ಗೆ ಸಂಶಯವಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಹೀಗೆ ಏಕಾಏಕಿ ಲಾಡ್ಜ್‍ಗೆ ತೆರಳಿ ಬೆದರಿಕೆ ಹಾಕುವುದು ಸರಿಯಲ್ಲವೆಂದು ವಾದಿಸಿದರು.
ಈ ಸಂದರ್ಭ ಎರಡು ಗುಂಪಿನ ನಡುವೆ ಪರ ವಿರೋಧ ಮಾತಿನ ಚಕಮಕಿ ನಡೆಯಿತು. ಕೂಡಲೇ ಸ್ಥಳಕ್ಕಾಗಮಿಸಿದ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಚಯ್ಯ ಹಾಗೂ ಸಿಬ್ಬಂದಿಗಳು ಪರಿಸ್ಥಿತಿಯನ್ನು ತಹಬದಿಗೆ ತಂದರು. ಬಳಿಕ ಅಸ್ಸಾಂ ಮೂಲದ ಕಾರ್ಮಿಕರನ್ನು ಠಾಣೆಗೆ ಕರೆದೊಯ್ದು ದಾಖಲಾತಿಗಳನ್ನು ಪರಿಶೀಲಿಸಿದ ಸಂದರ್ಭ 14 ಮಂದಿ ಅಸ್ಸಾಂ ಮೂಲದವರು ಹಾಗೂ ನಾಲ್ವರು ಬಿಹಾರ ರಾಜ್ಯದವರೆಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗುಂಪೊಂದು ಕಾರ್ಮಿಕರ ಆಧಾರ್ ಕಾರ್ಡ್‍ನಲ್ಲಿ ಕೇವಲ ನಾಲ್ಕು ಡಿಜಿಟ್‍ಗಳಿದ್ದು, ಇದು ನಕಲಿಯಾಗಿದೆ ಎಂದು ಆರೋಪಿಸಿದರು.
ಈ ಕುರಿತು ಕಾಫಿ ಮಂಡಳಿಯ ಮಾಜಿ ಸದಸ್ಯ ಡಾ. ಸಣ್ಣುವಂಡ ಕಾವೇರಪ್ಪ ಅವರು, ಕಾಫಿ, ಕರಿಮೆಣಸು ಬೆಲೆ ಕುಸಿತಗೊಂಡು ಬೆಳೆಗಾರರು ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ಅಸ್ಸಾಂ ಕಾರ್ಮಿಕರು ಬಂದಿರುವುದು ವರದಾನದಂತಾಗಿದೆ. ಆದರೆ ಸಂಬಂಧಿಸಿದ ತೋಟದ ಮಾಲೀಕರು ಅಸ್ಸಾಂ ಮೂಲದ ಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಪೊಲೀಸರಿಗೆ ನೀಡಿ, ಕಾರ್ಮಿಕರು ಅಸ್ಸಾಂ ಮೂಲದವರೇ ಅಥವಾ ಬಾಂಗ್ಲಾ ದೇಶಿಗರೇ ಎಂಬದನ್ನು ಖಚಿತಪಡಿಸಿ ಕೊಳ್ಳಬೇಕೆಂದು ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ವಿಧ್ವಂಸಕ ಕೃತ್ಯಗಳು ಹೆಚ್ಚುತ್ತಿರುವ ದಿಸೆಯಲ್ಲಿ ತೋಟದ ಮಾಲೀಕರು ಈ ಬಗ್ಗೆ ಜಾಗೃತರಾಗಿರಬೇಕೆಂದು ಹೇಳಿದರು.
ಮನ್ಸೂರ್ ಅಲಿ ಮಾತನಾಡಿ, ಕಾರ್ಮಿಕರ ಬಗ್ಗೆ ಸಂಶಯವಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಏಕಾಏಕಿ ಲಾಡ್ಜ್‍ಗೆ ತೆರಳಿ ಬೆದರಿಕೆ ಹಾಕುವುದು ಸರಿಯಲ್ಲ. ಪಟ್ಟಣದ ಲಾಡ್ಜ್‍ನಲ್ಲಿ ಕಳೆದ ಆರು ತಿಂಗಳಿನಿಂದ ಅಸ್ಸಾಂ ಮೂಲದ ಕಾರ್ಮಿಕರು ತಂಗಿರುವ ಬಗ್ಗೆ ಮಾಹಿತಿಯಿದ್ದು, ಕೆಲವೊಂದು ತೋಟದ ಮಾಲೀಕರು ಅಸ್ಸಾಂ ಮೂಲದ ಕಾರ್ಮಿಕರಿಗೆ ಮುಂಗಡವಾಗಿ ಹಣ ನೀಡಿದ್ದು, ಹಣದ ವಸೂಲಾತಿ ಮಾಡಲು ಕೆಲಸ ನೀಡುತ್ತಿದ್ದಾರೆ. ಆದರೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಇಂತಹ ತೋಟದ ಮಾಲೀಕರು ಕಾರ್ಮಿಕರನ್ನು ಪಟ್ಟಣಕ್ಕೆ ವಾಪಸ್ಸು ಕಳುಹಿಸುತ್ತಿಲ್ಲವೆಂದು ಗೊತ್ತಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರದಿಂದ ಮೂರು ಸಾವಿರದಷ್ಟು ಅಸ್ಸಾಂ ಮೂಲದ ಕಾರ್ಮಿಕರಿದ್ದು, ತೋಟದ ಮಾಲೀಕರು ಅಸ್ಸಾಂ ಮೂಲದ ಕಾರ್ಮಿಕರ ಬಗ್ಗೆ ಮಾಹಿತಿಯನ್ನು ಖಚಿತಪಡಿಸಿಕೊಂಡ ಬಳಿಕ ಕೆಲಸ ನೀಡಬೇಕು ಹಾಗೂ ಸ್ಥಳೀಯ ನಿವಾಸಿಗಳು ಈ ಬಗ್ಗೆ ಎಚ್ಚರ ವಹಿಸಬೇಕೆಂದು ಹೇಳಿದರು. ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹಿಮಾನ್ ಅವರ ಪ್ರಕಾರ ಕಾರ್ಮಿಕರನ್ನು ತಮ್ಮ ತೋಟ ಕೆಲಸಕ್ಕೆ ಬಳಸಿಕೊಳ್ಳುವ ಸಂದರ್ಭ ಬೆಳೆಗಾರರೂ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದಿದ್ದಾರೆ.
ಸ್ಥಳೀಯರಾದ ಗಣೇಶ್ ಅವರ ಪ್ರಕಾರ ಲಾಡ್ಜ್‍ನಲ್ಲಿ ತಂಗಿರುವವರ ಬಗ್ಗೆ ಸಾರ್ವಜನಿಕರಾದ ನಾವು ವಿಚಾರಿಸಿದ್ದು ನಿಜ. ಅಸ್ಸಾಮಿಗರು, ತಮ್ಮಲ್ಲಿ ಆಧಾರ್ ಕಾರ್ಡ್ ಇಲ್ಲವೆಂದಿದ್ದಾರೆ. ಈ ಬಗ್ಗೆ ವಿಚಾರಿಸಲಾಯಿತು ಎಂದಿದ್ದಾರೆ.
-ದುಗ್ಗಳ ಸದಾನಂದ