ಮಡಿಕೇರಿ, ಜ. 21: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಹಾಗೂ ಭಕ್ತರು ಒತ್ತಾಯಿಸಿದ್ದಾರೆ.

ತಲಕಾವೇರಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ಪ್ರತಿದಿನ ಸಾವಿರಾರು ಭಕ್ತರು ಬಂದು, ಹೋಗುತ್ತಾರೆ. ಆದರೆ ಭಕ್ತರ ಅನುಕೂಲಕ್ಕಾಗಿ ಯಾವುದೇ ಬಸ್ ವ್ಯವಸ್ಥೆಗಳಿಲ್ಲ. ಬೆಳಗ್ಗೆ 7.30 ರಿಂದ 8.30 ರ ಅವಧಿಯಲ್ಲಿ ಒಂದು ಖಾಸಗಿ ಮತ್ತು ಒಂದು ಕೆಎಸ್‍ಆರ್‍ಟಿಸಿ ಬಸ್ ಮಾತ್ರ ತೆರಳುತ್ತದೆ. ಆ ನಂತರ ಯಾವುದೇ ಬಸ್‍ಗಳ ಸಂಚಾರ ಇರುವುದಿಲ್ಲ, ಇದರಿಂದ ಭಕ್ತರು ಮಾತ್ರವಲ್ಲದೆ ಸ್ಥಳೀಯ ಗ್ರಾಮಸ್ಥರಿಗೂ ಅನಾನು ಕೂಲವಾಗಿದೆ. ಭಾಗ ಮಂಡಲ ದಿಂದ ತಲಕಾವೇರಿಗೆ ಅಥವಾ ತಲಕಾವೇರಿಯಿಂದ ಭಾಗಮಂಡಲಕ್ಕೆ ತೆರಳುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಖಾಸಗಿ ಬಸ್ ಮಾಲೀಕರು ನಷ್ಟದ ಕಾರಣ ನೀಡುತ್ತಾರೆ, ಆದರೆ ಕೆಎಸ್‍ಆರ್‍ಟಿಸಿ ಆಡಳಿತ ಮಂಡಳಿ ಯಾವುದೇ ಕಾರಣ ನೀಡದೆ ಬಸ್‍ಗಳ ಕೊರತೆಯನ್ನು ಸೃಷ್ಟಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆರ್ಥಿಕವಾಗಿ ಹಿಂದುಳಿದವರು ಭಾಗಮಂಡಲದವರೆಗೆ ಬಸ್‍ನಲ್ಲಿ ಬಂದು ಶ್ರೀಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ತಲಕಾವೇರಿಗೆ ತೆರಳ ಬೇಕೆಂದರೆ ಜೀಪು, ಆಟೋರಿಕ್ಷಾ ಅಥವಾ ಇನ್ನಿತರ ಬಾಡಿಗೆ ವಾಹನಗಳನ್ನೇ ಅವಲಂಭಿಸ ಬೇಕಾಗಿದೆ. ಈ ರೀತಿಯ ವಾಹನಗಳ ಬಾಡಿಗೆ ರೂ.300 ರಿಂದ 500 ವರೆಗೆ ಇದ್ದು, ಇದು ದುಬಾರಿಯಾಗಿರುವುದರಿಂದ ಭಕ್ತರು ಮಾತ್ರವಲ್ಲದೆ ಗ್ರಾಮಸ್ಥರು ಕೂಡ ಕಷ್ಟ ಅನುಭವಿಸುತ್ತಿದ್ದಾರೆ. ಈ ದಿಸೆಯಲ್ಲಿ ನಿತ್ಯ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.