ಬೆಂಗಳೂರು, ಜ. 21: ಟಿಪ್ಪು ಸುಲ್ತಾನ್ ಕುರಿತ ಅಧ್ಯಾಯ ಮುಂದಿನ ಶೈಕ್ಷಣಿಕ ವರ್ಷದಲ್ಲೂ (2020-21) ಶಾಲಾ ಪಠ್ಯದಲ್ಲಿ ಮುಂದುವರೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ತಿಳಿಸಿದ್ದಾರೆ.
ಟಿಪ್ಪು ಕುರಿತು ಆಳವಾದ ಚರ್ಚೆ ಆಗಬೇಕಾಗಿದ್ದು, ಅದಕ್ಕೆ ಇನ್ನೊಂದು ಸಮಿತಿ ರಚಿಸಬೇಕಾಗಿ ಡಿ.ಎಸ್.ಇ.ಆರ್.ಟಿ. ತಜ್ಞರ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯ ಲಭ್ಯವಾಗಬೇಕಾದ ಕಾರಣಕ್ಕೆ ಈಗಾಗಲೇ ಪಠ್ಯಗಳ ಮುದ್ರಣಕ್ಕೆ ಆದೇಶ ನೀಡಲಾಗಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಟಿಪ್ಪು ಅಧ್ಯಾಯ ಕೈ ಬಿಡಲು ಅಸಾಧ್ಯ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ಸಚಿವ ಸುರೇಶ್ ಕುಮಾರ್ ಅವರಿಗೆ ಟಿಪ್ಪು ಅಧ್ಯಾಯವನ್ನು ಪಠ್ಯದಿಂದ ಕೈ ಬಿಡುವಂತೆ ಕೋರಿ ಪತ್ರ ಬರೆದಿದ್ದರು. ಈ ಪ್ರಸ್ತಾವನೆಯ ಕುರಿತು ರಾಜ್ಯ ಉಚ್ಚ ನ್ಯಾಯಾಲಯ ಕೂಡ, ಸರಕಾರದಿಂದ ಮರು ಪರಿಶೀಲನೆಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.