ನಾಪೋಕ್ಲು, ಜ. 19: ಕೊಡಗು ಪ್ಯಾಕೇಜ್ ವತಿಯಿಂದ ಸುಮಾರು ಒಂದೂವರೆ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾದ ಎಮ್ಮೆಮಾಡು ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಸಂಬಂಧಿಸಿದ ಗುತ್ತಿಗೆದಾರರ ವಿಳಂಬ ಧೋರಣೆಯಿಂದಾಗಿ ಗ್ರಾಮಸ್ಥರಿಗೆ ನಿತ್ಯವೂ ಸಮಸ್ಯೆ ಎದುರಾಗಿದೆ.
ನಾಪೋಕ್ಲು- ಭಾಗಮಂಡಲ ಮುಖ್ಯರಸ್ತೆಯ ಎಮ್ಮೆಮಾಡು ಜಂಕ್ಷನ್‍ನಿಂದ ಐತಿಹಾಸಿಕ ಸೂಫಿ ಶಹೀದ್ ದರ್ಗಾಕ್ಕೆ ತೆರಳುವ ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ರಸ್ತೆ ಸಂಪೂರ್ಣ ಧೂಳುಮಯವಾಗಿದೆ. ಐತಿಹಾಸಿಕ ಸೂಫಿ ಶಹೀದ್ ಅವರ ದರ್ಗಾ ಶರೀಫ್‍ನ ಉರೂಸ್ ಸಮಾರಂಭ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದ್ದು, ಊರೂಸ್ ಸಮಾರಂಭಕ್ಕೆ ಜಿಲ್ಲೆ, ಹೊರಜಿಲ್ಲೆ ಹಾಗೂ ರಾಜ್ಯದ ವಿವಿದೆಢೆಗಳಿಂದ ಅಸಂಖ್ಯಾತ ಭಕ್ತರು ಪಾಲ್ಗೊಳ್ಳುವುದರಿಂದ ವಾಹನಗಳ ಸಂಚಾರವೂ ಅಧಿಕವಿರುತ್ತದೆ ಈ ಹಿನ್ನೆಲೆಯಲ್ಲಿ ಕೂಡಲೇ ರಸ್ತೆ ಕಾಮಗಾರಿಯನ್ನು ಪೂರೈಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.