ಸೋಮವಾರಪೇಟೆ, ಜ. 19: ಜಿಲ್ಲೆಯ ಗಡಿ ಗ್ರಾಮವಾದ ವಣಗೂರು ಕೂಡುರಸ್ತೆಯ ಕೊಂಗಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ 349ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಜಾತ್ರೆಯ ಪ್ರಯುಕ್ತ ಬೆಳಗ್ಗಿನಿಂದಲೇ ವಿವಿಧ ಪೂಜಾ ಕಾರ್ಯಗಳು ನಡೆದವು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹೆಗ್ಗಡಳ್ಳಿ ಮಠದ ಷಡ್ಭಾವರಹಿತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮಲ್ಲಿಕಾರ್ಜುನ ಸ್ವಾಮೀಜಿ, ಹಾಸನದ ಆದಿ ಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ದೇವಾಲಯ ಆಡಳಿತ ಮಂಡಳಿ ಹಾಗೂ ಗೊದ್ದು, ತಂಬೈಲು, ಹುಡ್ರಮನೆ, ಕೊಂಗಳ್ಳಿ, ತಿಪ್ಪಳ್ಳಿ, ದೊಡ್ಡಗದ್ದೆ, ಮಟ್ಟದಗದ್ದೆ, ಹೆಬ್ಬಯಿಲು, ಕೆರೆಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜಾತ್ರಾ ಮಹೋತ್ಸವದ ಪ್ರಯುಕ್ತ ಪುರುಷರಿಗೆ ಹಾಗೂ ಮಹಿಳೆಯರಿಗೆ ಕಬಡ್ಡಿ, ಥ್ರೋಬಾಲ್ ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಿತು.

ಪುರುಷರ ಕಬಡ್ಡಿ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಮಲ್ನಾಡ್ ಯೂತ್ ಅಸೋಸಿಯೇಷನ್ ತಂಡವು ಮಲ್ನಾಡ್ ಸ್ನೇಹ ಸೇವಾಸಂಘದ ವಿರುದ್ಧ ಗೆಲುವು ಸಾಧಿಸುವದ ರೊಂದಿಗೆ ಪ್ರಶಸ್ತಿ ಮುಡಿಗೇರಿಸಿ ಕೊಂಡಿತು. ಕಬಡ್ಡಿ ಪಂದ್ಯಾಟದಲ್ಲಿ ಮಲ್ನಾಡ್ ಯೂತ್ಸ್ ಅಸೋಸಿಯೇಷನ್‍ನ “ಬಿ” ತಂಡ ಮೂರನೇ ಸ್ಥಾನ ಪಡೆಯಿತು.