ಶನಿವಾರಸಂತೆ, ಜ. 16: ಬೆಂಬಳೂರು ಗ್ರಾಮದಲ್ಲಿ ಗುರುವಾರ ಬಾಣಂತಮ್ಮ ದೇವಿ ಹಾಗೂ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೆ ವಿಜೃಂಭಣೆಯಿಂದ ಜರುಗಿತು.
ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ, ಸಕಲೇಶಪುರ ತಾಲೂಕಿನ ಹೆತ್ತೂರು, ಯಸಳೂರು, ಚಂಗಡಹಳ್ಳಿ ಸೇರಿದಂತೆ ಅನೇಕ ಕಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ಗ್ರಾಮೀಣ ಸಂಸ್ಕøತಿಯ ಜಾನಪದ ಸೊಗಡಿನ ಐತಿಹಾಸಿಕ ಜಾತ್ರೆಗೆ ಸಾಕ್ಷಿಯಾದರು.
ಬೆಳಿಗ್ಗೆ ಬಾಣಂತಮ್ಮ ದೇವಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಜಾತ್ರ ಮೈದಾನಕ್ಕೆ ಕೊಂಡೊಯ್ದು ಮಂಟಪದಲ್ಲಿ ಇರಿಸಲಾಯಿತು. ಭಕ್ತಾದಿಗಳಿಂದ ಪೂಜಾ ವಿಧಿವಿಧಾನಗಳು ನಡೆದವು. ಮಡೆಗಾಗಿ ಸ್ವೀಕರಿಸಿದ ಪದಾರ್ಥಗಳಿಂದ ತಯಾರಿಸಿದ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಬಾಣಂತಮ್ಮನ ಜಾತ್ರೆ ಮುಕ್ತಾಯವಾಯಿತು. ದೇವಿಯ ಅಡ್ಡಪಲ್ಲಕ್ಕಿಯನ್ನು ಮರಳಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು.
ಮಧ್ಯಾಹ್ನ ನಂತರ 2 ಗಂಟೆಗೆ ಬಾಣಂತಮ್ಮ ದೇವಿಯ ಮಗ ಕುಂಟು ಮಗ ಕುಮಾರಲಿಂಗೇಶ್ವರ ಜಾತ್ರೆ ಆರಂಭವಾಯಿತು. ಕುಮಾರಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಪಲ್ಲಕ್ಕಿಯಲ್ಲಿ ಹೊತ್ತು; ಕುಂಟುತ್ತಲೆ ಮೆರವಣಿಗೆಯಲ್ಲಿ ಜಾತ್ರಾ ಮೈದಾನಕ್ಕೆ ಕರೆತರಲಾಯಿತು. ಭಕ್ತಾದಿಗಳು ಪೂಜಾ ವಿಧಿಗಳು ನೆರವೇರಿದ ಬಳಿಕ ಸಂಜೆ ಜಾತ್ರೆ ಸಂಪನ್ನವಾಗಿ ಕುಮಾರಲಿಂಗೇಶ್ವರ ದೇವರ ಅಡ್ಡಪಲ್ಲಕ್ಕಿಯನ್ನು ಮರಳಿ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.