ಸೋಮವಾರಪೇಟೆ,ಜ.17: ಮೈಸೂರಿನಲ್ಲಿ ನಡೆದ ಹಲ್ಲೆ, ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಪಟ್ಟಣದ ಯುವಕ ಸೇರಿದಂತೆ 7 ಮಂದಿ ಆರೋಪಿ ಗಳನ್ನು ಕೆ.ಆರ್. ಪೊಲೀಸರು ಬಂಧಿಸಿದ್ದಾರೆ.ಕಳೆದ ತಾ. 14 ರಂದು ರಾತ್ರಿ 11.30 ಗಂಟೆಗೆ ಕೆ.ಆರ್. ಠಾಣೆ ಮೊಹಲ್ಲಾ ವಾಸಿ ಅನಿಲ್ ಎಂಬಾತ ತನ್ನ ಸ್ನೇಹಿತರ ಬಳಿ ಮಾತನಾಡುತ್ತಿದ್ದ ಸಂದರ್ಭ ಸೋಮವಾರಪೇಟೆ ಪಟ್ಟಣದ ಮಹದೇಶ್ವರ ಬ್ಲಾಕ್ ನಿವಾಸಿ ಬಿ.ಡಿ. ರವಿ ಅವರ ಪುತ್ರ ಬಿ.ಆರ್. ಭರತ್ (ಜಗ್ಗ) ಸೇರಿದಂತೆ ಮೈಸೂರಿನ ಕೆಲವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ನಡೆಸಿ, ಆತನ ಬಳಿಯಿದ್ದ ಹಣವನ್ನು ಕಿತ್ತುಕೊಂಡು, ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ (ಮೊದಲ ಪುಟದಿಂದ) ಒಟ್ಟು 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ವಿವರ: ತಾ. 14ರಂದು ಅನಿಲ್‍ನ ಬಳಿ ಬೆಂಕಿಪೊಟ್ಟಣ ಕೇಳಿದ್ದು, ಬೆಂಕಿ ಪೊಟ್ಟಣ ಇಲ್ಲ ಎಂದು ಹೇಳಿದಾಗ ಭರತ್‍ನ ಸ್ನೇಹಿತ ನಿತೀನ್ ಜಗಳ ತೆಗೆದು, ಅನಿಲ್ ಮತ್ತು ಆತನ ಸ್ನೇಹಿತರಿಗೆ ಹಲ್ಲೆ ಮಾಡಿದ್ದಾನೆ.

ನಂತರ ಅನಿಲ್ ತನ್ನ ಸ್ಕೂಟರ್‍ನಲ್ಲಿ ಸ್ನೇಹಿತರನ್ನು ಅವರುಗಳ ಮನೆಗೆ ಬಿಟ್ಟು, ತನ್ನ ಮನೆಗೆ ಹೋಗುವಾಗ ಭರತ್ ಸೇರಿದಂತೆ ಮೈಸೂರಿನ ನಿತೀನ್, ಆಕರ್ಷ್, ಜಯಂತ್, ಮಂಜುನಾಥ್, ಚೇತನ್, ಚಂದ್ರು ಅವರುಗಳು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದು ಕೊಲೆ ಮಾಡುವ ಉದ್ದೇಶದಿಂದ ಕಾರಿನಿಂದ ಅನಿಲ್ ಸ್ಕೂಟರ್‍ಗೆ ಡಿಕ್ಕಿ ಹೊಡೆಸಿದ್ದಾರೆ.

ನಂತರ ಅನಿಲ್‍ನನ್ನು ಕಾರಿನಲ್ಲಿ ಕೂರಿಸಿಕೊಂಡು ಚಾಕು ತೋರಿಸಿ ಹೆದರಿಸಿ ಅವರ ಬಳಿಯಿದ್ದ ರೂ. 21,050 ನಗದು ಹಣ ಹಾಗೂ ಒಂದು ಮೊಬೈಲ್ ಫೋನನ್ನು ಕಿತ್ತುಕೊಂಡಿದ್ದು, ನಂತರ ಸರಸ್ವತಿಪುರಂನಲ್ಲಿರುವ ರೂಮ್ ಒಂದಕ್ಕೆ ಕರೆದುಕೊಂಡು ಹೋಗಿ ಅಕ್ರಮವಾಗಿ ಬಂಧನದಲ್ಲಿಟ್ಟು 50,000 ರೂ. ನೀಡುವಂತೆ ಒತ್ತಾಯ ಮಾಡಿದ್ದಾರೆ. ಹಣ ನೀಡದಿದ್ದರೆ ಕೊಲೆ ಮಾಡುವದಾಗಿ ಬೆದರಿಕೆ ಒಡ್ಡಿದ್ದಾರೆ.

ತಾ. 15 ರಂದು ಮಧ್ಯಾಹ್ನ ಅನಿಲ್ ರೂಂ ನಿಂದ ತಪ್ಪಿಸಿಕೊಂಡು ಹೊರಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಕೃಷ್ಣರಾಜ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣದ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಅನಿಲ್‍ರವರಿಂದ ಕಿತ್ತುಕೊಂಡು ಹೋಗಿದ್ದ 1 ದ್ವಿಚಕ್ರ ವಾಹನ, 4 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 3ದ್ವಿಚಕ್ರ ವಾಹನ, 1 ಕಾರು ಹಾಗೂ 6ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಹಣವನ್ನು ಆರೋಪಿಗಳು ಖರ್ಚು ಮಾಡಿಕೊಂಡಿರುವದಾಗಿ ಒಪ್ಪಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಎಲ್.ಶ್ರೀನಿವಾಸ್, ಎ.ಎಸ್.ಐ. ಡಿ.ಬಿ.ಸುರೇಶ್ ಮತ್ತು ಸಿಬ್ಬಂದಿಗಳಾದ ಅನಿಲ್ ಶಂಕಪಾಲ್, ಮೊಖದ್ದರ್ ಷರೀಫ್, ರಮೇಶ್, ಮಧು, ಶಿವಕುಮಾರಸ್ವಾಮಿ, ಮಣಿಕಂಠ ಪ್ರಸಾದ್ ಅವರುಗಳು ಭಾಗವಹಿಸಿದ್ದರು.