ಸೋಮವಾರಪೇಟೆ ತಾಲೂಕು, ಕೊಡ್ಲಿಪೇಟೆ ಹೋಬಳಿ, ಬೆಸೂರು ಗ್ರಾಮ ನಿವಾಸಿ, ವೃತ್ತಿಯಲ್ಲಿ ಕೃಷಿಕರಾಗಿರುವ ಶಾಂತೇಶ್ ಅವರು ಅಪರೂಪದ ಕರಟ ವಾದನ ಕಲಾವಿದ. ಮೂಲತಃ ಸೋಮವಾರಪೇಟೆಯ ರೇಂಜರ್ ಬ್ಲಾಕ್ ನಿವಾಸಿ, ಪೋಸ್ಟ್ ಮೆನ್ ಆಗಿದ್ದ ಬಿ.ಜಿ. ದೇವಿದಾಸ್ ಅವರು ಈ ಕರಟವಾದನದ ನಿರ್ಮಾತೃ. 1979-80ರಲ್ಲಿ ಬೆಸೂರು ನಂಜಣ್ಣ ಅವರು ನಿರ್ವಹಿಸುತ್ತಿದ್ದ ‘ಜಾನಪದ ರಾಗರಂಜಿನಿ’ ಎಂಬ ಕಲಾತಂಡದಲ್ಲಿದ್ದ ದೇವಿದಾಸ್ ಅವರಿಂದ ಬೆಸೂರು ನಂಜಣ್ಣ ಅವರು ಈ ಕಲೆಯನ್ನು ಕರಗತ ಮಾಡಿಕೊಂಡರು.
ಇದೇ ತಂಡದಲ್ಲಿದ್ದ ನಂಜಣ್ಣ ಅವರ ಪುತ್ರ ಶಾಂತೇಶ್ ಅವರಿಗೂ ಸಹ ಈ ಕಲೆಯ ವ್ಯಾಮೋಹ ಹೆಚ್ಚಿತು. ಇವರಿಗೆ 11 ವರ್ಷ ಪ್ರಾಯವಾದಾಗ ಕರಟವಾದನವನ್ನು ಅಭ್ಯಾಸ ಮಾಡಲು ಆಸಕ್ತಿ ಬೆಳೆಯಿತು. ದೇವಿದಾಸ್ ಹಾಗೂ ಬೆಸೂರು ನಂಜಣ್ಣ ಅವರ ಕಾಲಾನಂತರ ಈ ಕಲೆ ಅಳಿದುಹೋಗಬಾರದು ಎಂಬ ಉದ್ದೇಶದಿಂದ ಶಾಂತೇಶ್ ಅವರು ತಮ್ಮ ತಂದೆಯಿಂದ ಪಕ್ಕಾ ಕರಟ ವಾದನ ಕಲಿತರು. ಬೇರೆಯವರು ಹಾಡಿದರೆ ದೇವಿದಾಸ್ ಅವರು ಕರಟ ವಾದನ ನುಡಿಸುತ್ತಿದ್ದರು. ಆದರೆ ಶಾಂತೇಶ್ ಅವರು ತಾವೇ ಜಾನಪದ ಗೀತೆಗಳನ್ನು ರಚಿಸಿಕೊಂಡು ಅದಕ್ಕೆ ಕರಟವಾದನದ ಸಂಗೀತ ಅಳವಡಿಸುವದನ್ನೂ ಕಲಿತರು. ಕಳೆದ 30 ವರ್ಷಗಳಿಂದ ಕರಟವಾದನದಲ್ಲಿ ಪಳಗಿರುವ ಇವರು, ಕಳೆದ 15 ವರ್ಷಗಳಿಂದ 30ಕ್ಕೂ ಅಧಿಕ ಜಾನಪದ ಗೀತೆಗಳನ್ನು ರಚಿಸಿ, ಕರಟವಾದನ ಅಳವಡಿಸಿದ್ದಾರೆ.
ದೇವರ ಉತ್ಸವ, ಗ್ರಾಮೀಣ ಪ್ರದೇಶದ ಜಾತ್ರೆ, ಜಾನಪದ ಬದುಕು, ಜಾನಪದ ಉತ್ಸವ, ಗ್ರಾಮೀಣ ಸೊಗಡಿನ ಬಗ್ಗೆ ಗೀತೆಗಳನ್ನು ರಚಿಸಿದ್ದಾರೆ. ನಿರಂತರ 15 ವರ್ಷಗಳ ಪ್ರಯತ್ನದಿಂದಾಗಿ ಕರಟವಾದನದಲ್ಲಿ ಪಳಗಿದರು. ಕರಟವಾದನಕ್ಕೆ ರಾಗ ಮತ್ತು ತಾಳ ಹೊಂದಾಣಿಕೆ ಬೇಕು. ಹೆಚ್ಚಿನದಾಗಿ ತಲ್ಲೀನತೆ ಬೇಕು. ತೆಂಗಿನ ಚಿಪ್ಪಿನ ಕರಟ, ಗಂಧ, ಬೈನೆ ಅಥವಾ ಬೀಟೆ ಮರದಿಂದ ಮಾಡುವ ದುಡಿಯಿಂದ ಹೊರಹೊಮ್ಮುವ ಶಬ್ದ-ತಬಲದ ನಾದ, ತಾಳವಾದ್ಯ ಹೊಂದಿದೆ ಎಂದು ಶಾಂತೇಶ್ ಅಭಿಪ್ರಾಯಿಸುತ್ತಾರೆ. ಕರ್ನಾಟಕ ಸೇರಿದಂತೆ ದೇಶದ ಯಾವದೇ ಮೂಲೆಯಲ್ಲೂ ಇಂತಹ ಕಲೆ ಇಲ್ಲ. ತೆಂಗಿನ ಚಿಪ್ಪಿನ ತಳಭಾಗದ ಚಿಕ್ಕ ಕಂಠವನ್ನು ಗಂಜಿಯಲ್ಲಿ ನೆನೆಹಾಕಿ, ಮೇಲಿನ ಹುರುಪು ತೆಗೆಯಬೇಕು. ನಂತರ ಜೇನು ಮೇಣವನ್ನು ಲೇಪನ ಮಾಡಿ ಕರಟವನ್ನು ಸಿದ್ಧಪಡಿಸಬೇಕು. ಗಂಧ, ಬೀಟೆ, ಬೈನೆ ಮರದ ಅರ್ಧ ಅಡಿ ಉದ್ದ, ಒಂದು ಹಿಡಿಕೆ ದಪ್ಪದ ದುಡಿ ತಯಾರಿಸಬೇಕು. ಈ ಮೂರು ಮರದ ಬದಲಿಗೆ ಬೇರೆ ಮರದ ದುಡಿ ಹಾಕಿದರೆ ನಾದ ಹೊರಡುವುದಿಲ್ಲ ಎನ್ನುವ ಶಾಂತೇಶ್ ಅವರು, ಸ್ವತಃ ತಾವೇ ಕರಟ-ದುಡಿಯನ್ನು ತಯಾರಿಸುತ್ತಾರೆ. ಕರಟ,ದುಡಿ ಮತ್ತು ಕೈಗೆ ಕಟ್ಟುವ ಸಣ್ಣ ಗೆಜ್ಜೆ ಜೊತೆಗೂಡಿದರೆ ಜಾನಪದ ಕಲಾ ಪ್ರಾಕಾರದಲ್ಲಿ ಎಲ್ಲೂ ಕಾಣದ ಕರಟವಾದನ ಸಿದ್ಧವಾಗುತ್ತದೆ.
ಅಳಿವಿನಂಚಿನ ಗ್ರಾಮೀಣ ಕಲೆಯನ್ನು ಜನರಿಗೆ ಪರಿಚಯಿಸುತ್ತಿರುವ ಶಾಂತೇಶ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸಂದರ್ಭವೇ ಕರಟವಾದನ ಕಲೆಯನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. 1985ರಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ ನಂಜಣ್ಣ ಅವರ ತಂಡದಲ್ಲಿ ಸಹಕಲಾವಿದನಾಗಿ ಕರಟವಾದನ ಮಾಡಿದ್ದಾರೆ.
ತದನಂತರ ವಿವಿಧ ಜಿಲ್ಲೆ ಹಾಗೂ ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರ ಕಲೆಯನ್ನು ಗುರುತಿಸಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಕ್ಕೂ ಭಾಜನರಾಗಿದ್ದಾರೆ. ಇಂತಹ ಕಲೆ ಅಳಿದು ಹೋಗಬಾರದು; ಉಳಿಯಬೇಕು ಎಂದು ನಂಜಣ್ಣ ಅವರು ಹೇಳಿದ್ದ ಮಾತಿನಂತೆ ಶಾಂತೇಶ್ ಅವರು ಈ ಕಲೆಯನ್ನು ತಮ್ಮಲ್ಲಿ ಮೈಗೂಡಿಸಿಕೊಂಡು ಮುಂದಿನ ಜನಾಂಗಕ್ಕೆ ವರ್ಗಾಯಿಸುತ್ತಿದ್ದಾರೆ.
ಜಾನಪದದ ವಿವಿಧ ಪ್ರಕಾರಗಳ ಹಾಡಿಗೂ ಶಾಂತೇಶ್ ಧ್ವನಿಯಾಗು ತ್ತಾರೆ. ಇವರ ಮನೆಯಲ್ಲಿ ಜಾನಪದ ವಸ್ತುಗಳ ಸಂಗ್ರಹವಿದೆ. ಜಾನಪದ ಉಪಕರಣಗಳನ್ನು ಇಂದಿಗೂ ಜೋಪಾನ ಮಾಡಿಟ್ಟುಕೊಂಡಿದ್ದಾರೆ. ಸುತ್ತಮುತ್ತಲ ನಾಲ್ಕೈದು ಹಳ್ಳಿಗಳಿಗೆ ಇವರ ಮನೆಯಲ್ಲಿ ಮಾತ್ರ ಇಂದಿಗೂ ಎತ್ತುಗಳು, ಎತ್ತಿನ ಗಾಡಿ ಇದೆ. ಜಾನಪದದ ಕೊಂಡಿ ಕಳಚಬಾರದು ಎಂಬ ಚಿಂತನೆಯೊಂದಿಗೆ ಸುಮಾರು 40 ವರ್ಷಗಳ ಹಿಂದಿನ ಗಾಡಿಯನ್ನು ಇಂದಿಗೂ ಜೋಪಾನವಾಗಿಟ್ಟುಕೊಂಡಿದ್ದಾರೆ. ದೇವದಾಸ್ ಅವರಿಂದ ನಮ್ಮ ತಂದೆ ಬೆಸೂರು ನಂಜಣ್ಣ, ಆನಂತರ ಅವರಿಂದ ನಾನು ಕಲಿತ ಕಲೆ ಅಳಿಯಬಾರದು ಎಂಬ ಉದ್ದೇಶದಿಂದ ತನ್ನ ಪುತ್ರ ದುಷ್ಯಂತ್ ಪಟೇಲ್ ಅವರಿಗೆ ಕಲಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅಭಿಮಾನದಿಂದ ಶಾಂತೇಶ್ ನುಡಿಯುತ್ತಾರೆ. ಒಟ್ಟಾರೆ ರಾಜ್ಯ ಮಾತ್ರವಲ್ಲ; ದೇಶದ ಯಾವದೇ ಮೂಲೆಯಲ್ಲೂ ಕಾಣಸಿಗದ ಕರಟವಾದನ ಕಲೆಯು, ಶಾಂತೇಶ್ ಅವರಲ್ಲಿ ಮಾತ್ರ ಕಾಣಬಹುದಾಗಿದೆ. ಈ ಕಲೆಯನ್ನು ಹೆಚ್ಚು ಮಂದಿಗೆ ಕಲಿಸುವ ಉದ್ದೇಶ ಶಾಂತೇಶ್ ಅವರಲ್ಲಿದ್ದರೂ, ಅಪರೂಪದ ಕಲೆಯನ್ನು ಕರಗತಮಾಡಿಕೊಳ್ಳುವ ಹಂಬಲದ ಮನಸ್ಸುಗಳು ಕಾಣಿಸುತ್ತಿಲ್ಲ ಎಂದು ನಿರಾಸೆ ವ್ಯಕ್ತಪಡಿಸು ತ್ತಾರೆ. ಈ ಕಲೆಯ ಬಗ್ಗೆ ಆಸಕ್ತಿ ಇರುವವರು ಶಾಂತೇಶ್ ಅವರ ಮೊ: 9353527225 ಸಂಖ್ಯೆಯನ್ನು ಸಂಪರ್ಕಿಸಬಹುದು. ? ವಿಜಯ್ ಹಾನಗಲ್