ಮಡಿಕೇರಿ, ಜ. 17: ಬಹುಭಾಷಾ ನಟಿ, ದಕ್ಷಿಣ ಭಾರತದಲ್ಲಿ ಸುದ್ದಿ ಮಾಡಿರುವ ಚಿತ್ರತಾರೆ ಕೊಡಗಿನವ ರಾದ ನಟಿ ರಶ್ಮಿಕಾ ಮಂದಣ್ಣ ಅವರ ವೀರಾಜಪೇಟೆ ನಿವಾಸದ ಮೇಲೆ ನಿನ್ನೆ ಐಟಿ ದಾಳಿಯಾಗಿರುವದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಈ ದಾಳಿ ಯಿಂದ ಏನಾಗಿದೆ, ಏತಕ್ಕಾಗಿ ದಾಳಿ ನಡೆದಿದೆ, ಏನೇನು ಲಭ್ಯವಾಗಿದೆ ಎಂಬಿತ್ಯಾದಿ ಕುತೂಹಲಗಳು ಸಹಜ ವಾಗಿಯೇ ಕೊಡಗು ಮಾತ್ರವಲ್ಲದೆ ರಾಜ್ಯದಲ್ಲಿ ಕುತೂಹಲ ಸೃಷ್ಟಿಸಿದೆ.ಇಲ್ಲಿ ದಾಳಿ ನಡೆದಿರುವದು ನಟಿ ರಶ್ಮಿಕಾ ವಿರುದ್ಧ ಮಾತ್ರವೇ ಅಥವಾ ಆಕೆಯ ತಂದೆ ಉದ್ಯಮಿಯಾಗಿರುವ ಮದನ್ ಮಂದಣ್ಣ ಅವರ ಕುರಿತಾಗಿಯೇ, ಅಥವಾ ಇವರಿಬ್ಬರ ಮೇಲಿನ ಜಂಟಿ ದಾಳಿಯೇ ಎಂಬದು ಇನ್ನೂ ಸ್ಪಷ್ಟಗೊಂಡಿಲ್ಲ. ಇದಲ್ಲದೆ ಈ ಕುಟುಂಬಕ್ಕೆ ಕೆಲವು ರಾಜಕೀಯ ವ್ಯಕ್ತಿಗಳ ನಂಟು ಇದ್ದು ಈ ಕಾರಣದಿಂದಾಗಿ ದಾಳಿ ನಡೆಯಿತೇ ಎಂಬದು ನಿನ್ನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.ಇದೀಗ ‘ಶಕ್ತಿ’ಗೆ ಕೆಲವೊಂದು ಮೂಲಗಳಿಂದ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ರಾಜಕೀಯ ನಂಟಿನ ಥಳಕಿನ ಹಿನ್ನೆಲೆಯ ದಾಳಿ ಇದಲ್ಲವೆನ್ನಲಾಗಿದೆ. ಅಲ್ಲದೆ ಮುಖ್ಯವಾಗಿ ರಶ್ಮಿಕಾಳ ವ್ಯವಹಾರದ ಕುರಿತಾಗಿಯೇ ದಾಳಿಗೆ ಮುಂದಾಗ ಲಾಗಿದೆ. ಇದರೊಂದಿಗೆ ಅವರ ತಂದೆಯ ವಹಿವಾಟು ಸೇರಿ ಕೊಂಡಿರುವದಾಗಿ ತಿಳಿದು ಬಂದಿದೆ.
ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಐಟಿ ದಾಳಿಗಳನ್ನು ಅವಲೋಕಿಸಿದಾಗ ಇದೊಂದು ಕೇವಲ ಸಣ್ಣ ಪ್ರಮಾಣ ವಿಚಾರವೆನ್ನ ಲಾಗುತ್ತಿದೆ. ಈ ತನಕ ನಡೆದಿರುವ ದಾಳಿಗಳೆಲ್ಲವೂ ಬಹುತೇಕ 10 ಕೋಟಿಗಳಿಗೆ ಮಿಗಿಲಾದದ್ದು; ಆದರೆ ನಿನ್ನೆ ನಡೆದ
(ಮೊದಲ ಪುಟದಿಂದ) ದಾಳಿಯಲ್ಲಿ ಹಣ ಹಾಗೂ ವ್ಯವಹಾರ ಕೇವಲ ನಾಲ್ಕೈದು ಕೋಟಿಗಳು ಎಂದು ಹೇಳಲಾಗಿದೆ. ಅದರಲ್ಲೂ ಈ ಮೊತ್ತ ಕೇವಲ ಒಬ್ಬರದ್ದಲ್ಲ. ತಂದೆ ಹಾಗೂ ಮಗಳದ್ದು ಸೇರಿ ಇಷ್ಟು ಮೊತ್ತವೆಂದು ಹೇಳಲಾಗಿದೆ.
ಇದು ಅಧಿಕೃತವಾದ ಮಾಹಿತಿ ಅಲ್ಲದಿದ್ದರೂ ಪತ್ರಿಕೆಗೆ ತಿಳಿದು ಬಂದಂತೆ ದಾಳಿ ಸಂದರ್ಭದಲ್ಲಿ ಮನೆಯಲ್ಲಿ ರೂ. 25 ಲಕ್ಷ ನಗದು ಸಿಕ್ಕಿದೆ, ಇದರೊಂದಿಗೆ ಮಂದಣ್ಣ ಅವರು ಆಸ್ತಿಯೊಂದರ ಖರೀದಿಗೆ ರೂ. 40 ರಿಂದ 50 ಲಕ್ಷ ನಗದು ಹಣ ನೀಡಿದ್ದಾರಂತೆ; ಇವು ಸೇರಿ ಕೇವಲ ರೂ. 4 ಕೋಟಿಯಷ್ಟು ಇನ್ನೂ ಲೆಕ್ಕಕ್ಕೆ ಸಿಗದ ಹಣ, ಆಸ್ತಿ ವಿವರ ಐಟಿಗೆ ದೊರೆತಿದೆ ಎಂಬದಾಗಿ ವಿವರ ಲಭ್ಯವಾಗಿದೆ. ಈ ಮೊತ್ತ ಕರ್ನಾಟಕ ರಾಜ್ಯದಲ್ಲಿ ಈ ತನಕ ನಡೆದಿರುವ ದಾಳಿಗಳಲ್ಲಿ ಕಡಿಮೆ ಮೊತ್ತದ್ದಾಗಿದೆ.
ಒಟ್ಟು 4 ಕೋಟಿಯ ಪೈಕಿ ರೂ. 1.5 ಕೋಟಿಯಷ್ಟು ಮಗಳದ್ದಾದರೆ ರೂ. 2.5 ಕೋಟಿ ತಂದೆಯ ವ್ಯವಹಾರದ್ದಾಗಿದೆ. ಇದನ್ನು ಇವರು ಒಪ್ಪಿರುವದಾಗಿ ಹೇಳಲಾಗಿದೆ. ರಶ್ಮಿಕಾ ಚಿತ್ರ ನಟಿಯಾಗಿ ಗುರುತಿಸಿಕೊಂಡಿದ್ದು; ಮೂರ್ನಾಲ್ಕು ವರ್ಷ ಕಳೆದಿದೆ. ವರ್ಷ ಕಳೆದಂತೆ ಈಕೆಯ ಐಟಿ ಪಾವತಿಯ ಮೊತ್ತದಲ್ಲೂ ಏರಿಕೆಯನ್ನು ಆಕೆ ತೋರಿಸಿದ್ದಾಳೆ ಎಂದೂ ಹೇಳಲಾಗಿದೆ. ಆದರೆ ಈಕೆಯ ಬಳಿ ಎರಡು ಪಾನ್ ಇತ್ತು ಎನ್ನಲಾಗಿದ್ದು; ಒಂದು ಪಾನ್ ಚಾಲ್ತಿಯಲ್ಲಿದ್ದು; ಇನ್ನೊಂದು ಚಾಲ್ತಿಯಲ್ಲಿಲ್ಲ ಎಂಬ ಮಾತು ಕೇಳಿ ಬಂದಿದೆ.
ಚಿತ್ರರಂಗದ ಆದಾಯವನ್ನು ಕೋಟಿಯಷ್ಟು ಈಕೆ ತೋರಿಸಿದ್ದರೂ ಜಾಹೀರಾತು ಮತ್ತಿತರ ಆದಾಯದ ಬಗ್ಗೆ ಮಾಹಿತಿ ಒದಗಿಸಿರಲಿಲ್ಲವಂತೆ. ಕೇವಲ ಒಂದೆರಡು ವರ್ಷದಲ್ಲಿ ಖ್ಯಾತ ತಾರೆಯಾದ ಹಿನ್ನೆಲೆ ಪ್ರಮುಖವಾಗಿ ರಶ್ಮಿಕಾರ ವ್ಯವಹಾರಗಳ ಮೇಲೆಯೇ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತವಾದ ವಿವರಗಳು ಇನ್ನಷ್ಟೆ ತಿಳಿದು ಬರಬೇಕಿದೆ.