ಕುಶಾಲನಗರ, ಜ 14: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ರೆಸಾರ್ಟ್ ವೊಂದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಕೊಡಗು ಜಿಲ್ಲೆಯ ವ್ಯಕ್ತಿಯೊಬ್ಬ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಕುಶಾಲನಗರದ ಯುವಕ ಲೋಹಿತ್ ಮತ್ತು ವಿಟ್ಲದ ಶರೀಫ್, ಜಮಾಲ್ ಬಂಧಿತ ಆರೋಪಿಗಳು. ವಿಟ್ಲದ ನಿವಾಸಿ ಜೀವನ್, ನೌಶಾದ್ ಸೇರಿದಂತೆ ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಉಪ್ಪಿನಂಗಡಿ ಸಮೀಪದ ರೆಸಾರ್ಟ್‍ನಲ್ಲಿ ಎರಡು ಜೋಡಿಗಳು ಇದ್ದ ಸಂದರ್ಭ ದಾಳಿ ಮಾಡಿದ 5 ಯುವಕರ ತಂಡ ತಾವು ಕೇರಳದ ಪೊಲೀಸರೆಂದು ಹೇಳಿಕೊಂಡು ಅವರನ್ನು ಬೆದರಿಸಿ ಸುಲಿಗೆಗೆ ಯತ್ನಿಸಿದ್ದಾರೆ. ಈ ಸಂದರ್ಭ ಕೇರಳ ಪೊಲೀಸರಿಂದ ಬಂದ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರು ಹನಿಟ್ರ್ಯಾಪ್ ನಿಪುಣರು ಎಂದು ಹೇಳಲಾಗಿದ್ದು ಇಬ್ಬರು ಯುವತಿಯರನ್ನು ಬಳಸಿಕೊಂಡು ಇವರ ಬಲೆಗೆ ಬೀಳುವ ಯುವಕರನ್ನು ಪತ್ತೆಹಚ್ಚಿ ಆರೋಪಿಗಳಿಗೆ ಸೇರಿರುವ ಮನೆಗೆ ಕರೆದುಕೊಂಡು ಹೋಗಿ ನಂತರ ಯುವತಿಯರೊಂದಿಗೆ ಜೋಡಿಮಾಡಿ ಉಪ್ಪಿನಂಗಡಿ ಬಳಿ ರೆಸಾರ್ಟ್‍ಗೆ ಕಳುಹಿಸಿಕೊಡುತ್ತಿದ್ದರು. ಬಳಿಕ ಆರೋಪಿಗಳು ಜೋಡಿಗಳು ತಂಗಿರುವ ಕೊಠಡಿಗೆ ಪೊಲೀಸರ ಸೋಗಿನಲ್ಲಿ ದಾಳಿ ನಡೆಸಿ ಬ್ಲಾಕ್‍ಮೇಲ್ ಮಾಡಿ ವಸೂಲಿ ಕೃತ್ಯ ಎಸಗುತ್ತಿದ್ದರು ಎಂದು ಉಪ್ಪಿನಂಗಡಿ ಪೊಲೀಸರು ತಿಳಿಸಿದ್ದಾರೆ.

ವಂಚನೆಗೆ ಒಳಗಾದ ಯುವಕರ ಪೈಕಿ ಓರ್ವ ತನ್ನ ಸಂಬಂಧಿಯಾಗಿದ್ದ ಕೇರಳದ ಪೊಲೀಸ್ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಇನ್ಸ್‍ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಪೊಲೀಸರ ತಂಡ ರೆಸಾರ್ಟ್‍ಗೆ ದಾಳಿ ಮಾಡಿದೆ. ಬಂಧಿತರಾದ ಪೈಕಿ ಲೋಹಿತ

(ಮೊದಲ ಪುಟದಿಂದ) ತನ್ನನ್ನು ಕೇರಳದ ಎಸ್.ಐ ಎಂದು ಪರಿಚಯಿಸಿಕೊಂಡಿದ್ದ. ಬಂಧಿತರ ಮೇಲೆ ಈ ಹಿಂದೆ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದು ಘಟನೆ ಸಂದರ್ಭ ಬಳಸಿದ್ದ ಇನ್ನೋರ್ವನ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ತಂಡವೊಂದನ್ನು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.