ಮಡಿಕೇರಿ,ಜ.14: ಕಳೆದ 5 ವರ್ಷಗಳ ಹಿಂದೆ ಆರಂಭಗೊಂಡ ಮಹಿಳಾ ಪದವಿ ಕಾಲೇಜಿಗೆ ಸ್ವಂತ ಕಟ್ಟಡ ಹೊಂದುವ ಕನಸಿಗೆ ಇದೀಗ ನನಸಾಗುವ ಕಾಲ ಕೂಡಿ ಬಂದಿದೆ. ನಗರದ ಗೌಡ ಸಮಾಜದ ಹಿಂದೆ 70 ಸೆಂಟು ಅಳತೆಯ ನಿವೇಶನದಲ್ಲಿ 2 ಅಂತಸ್ತಿನ ಮಹಿಳಾ ಪದವಿ ಕಾಲೇಜು ತಲೆ ಎತ್ತಲಿದ್ದು, ಕಟ್ಟಡ ಕಾಮಗಾರಿಗಾಗಿ ನಿವೇಶನವನ್ನು ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ. 2 ಅಂತಸ್ತಿನ ಕಾಲೇಜು ಕಟ್ಟಡದಲ್ಲಿ ತಲಾ 6 ಕೊಠಡಿಗಳಿರಲಿದ್ದು ಗ್ರಂಥಾಲಯ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒಳಗೊಂಡಿರಲಿದೆ. ಕೆಳ ಮಹಡಿಯಲ್ಲಿ ವಾಹನ ಪಾರ್ಕಿಂಗ್, ಮೊದಲ ಮಹಡಿಯಲ್ಲಿ ಕಲಾ ವಿಭಾಗ, 2ನೇ ಮಹಡಿಯಲ್ಲಿ ವಾಣಿಜ್ಯ ವಿಭಾಗಗಳು ಕಾರ್ಯ ನಿರ್ವಹಿಸಲಿವೆ. ಅದರೊಂದಿಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಆಡಿಟೋರಿಯಂ ಬಳಿ ಸಂಯುಕ್ತ ಕಾಲೇಜು ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, 60 ಸೆಂಟು ಸ್ಥಳದಲ್ಲಿ ಸಂಯುಕ್ತ ಕಾಲೇಜು ನಿರ್ಮಾಣ ವಾಗಲಿದೆ. ಈ ಎರಡು ಕಾಲೇಜುಗಳ ನಿರ್ಮಾಣ ಕಾಮಗಾರಿ ಏಕಕಾಲದಲ್ಲಿ ನಡೆಯಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಲಭ್ಯವಾಗಲಿದೆ. ಈ ಎರಡೂ

(ಮೊದಲ ಪುಟದಿಂದ) ಕಾಲೇಜುಗಳ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರಕಾರ ಒಟ್ಟು 4 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಉದ್ದೇಶಿತ ಕಟ್ಟಡದ ನೀಲಿನಕ್ಷೆಯೂ ಸಿದ್ದವಾಗಿದ್ದು, ಸದ್ಯದಲ್ಲಿಯೇ ಕಟ್ಟಡ ಕಾಮಗಾರಿ ಆರಂಭವಾಗಲಿದೆ. ಮಹಿಳಾ ಕಾಲೇಜಿನಲ್ಲಿ 200 ವಿದ್ಯಾರ್ಥಿಗಳು ಹಾಗೂ ಸಂಯುಕ್ತ ಕಾಲೇಜಿನಲ್ಲಿ ಒಟ್ಟು 400 ಮಂದಿ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಲು ಅನುಕೂಲ ಮತ್ತು ಅವಕಾಶ ಕಲ್ಪಿಸಲಾಗುತ್ತಿದೆ.

ಕಾಲೇಜುಗಳು ನಿರ್ಮಾಣವಾಗುತ್ತಿರುವ ಪ್ರದೇಶಕ್ಕೆ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅವರುಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಕಟ್ಟಡ ಕಾಮಗಾರಿ ನಿರ್ವಹಿಸುವ ಇಂಜಿನಿಯರ್‍ಗಳಿಂದ ಸಂಸದರು ಮತ್ತು ಶಾಸಕರು ಕಟ್ಟಡದ ಬಗ್ಗೆ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲು ಕಳೆದ 5 ವರ್ಷಗಳಿಂದ ಸಾಕಷ್ಟು ಕಡೆಗಳಲ್ಲಿ ನಿವೇಶನಗಳನ್ನು ಹುಡುಕಲಾಗುತ್ತಿತ್ತು. ನಗರದ ಹೊರವಲಯದಲ್ಲಿ ಮಹಿಳಾ ಕಾಲೇಜು ನಿರ್ಮಿಸುವುದು ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂದು ಚಿಂತಿಸಿ, ನಗರದ ಒಳಗೆ ಸೂಕ್ತ ನಿವೇಶನಕ್ಕೆ ಶೋಧ ನಡೆಸಿದ ಸಂದರ್ಭ ಪಾಳು ಬಿದ್ದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ವಸತಿ ಸಮುಚ್ಚಯವನ್ನು ಇದಕ್ಕಾಗಿ ಬಳಕೆ ಮಾಡಲು ನಿರ್ಧರಿಸಲಾಯಿತು ಎಂದು ಹೇಳಿದರು. ಈ ಹಿಂದೆ ನಗರದ ದಾಸವಾಳ ಕೆರೆಯ ಬಳಿ ಕಾಲೇಜು ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿತ್ತಾದರೂ, ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಅಲ್ಲಿ ಕಟ್ಟಡ ಕಾಮಗಾರಿ ಮಾಡುವಂತಿರಲಿಲ್ಲ ಎಂದು ಅಪ್ಪಚ್ಚು ರಂಜನ್ ಹೇಳಿದರು. ಸರಕಾರಿ ಮಹಿಳಾ ಕಾಲೇಜಿನಲ್ಲಿ ಬಡವರ್ಗದ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಲೇಜು ಕಾಮಗಾರಿಗೆ ಯಾರೂ ಕೂಡ ಅಡ್ಡಿಪಡಿಸಬಾರದು ಎಂದು ಹೇಳಿದರು. ಗೌಡ ಸಮಾಜದ ಪಕ್ಕದಲ್ಲೇ ಮಹಿಳಾ ಕಾಲೇಜು ನಿರ್ಮಾಣವಾಗುತ್ತಿದ್ದು, ಕಾಲೇಜಿನ ಕಿಟಕಿಗಳಿಗೆ ಸೌಂಡ್ ಪ್ರೂಫ್ ಗಾಜನ್ನು ಅಳವಡಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿ ಅನುದಾನವನ್ನೂ ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಗುತ್ತಿಗೆದಾರರು ಹಾಜರಿದ್ದರು.