ಮಡಿಕೇರಿ, ಜ. 14: ಜಿಲ್ಲೆಯಲ್ಲಿ ನಕಲಿ ಚಾಕಲೇಟ್ ದಂಧೆ ವಿರುದ್ಧ ಯಾವದೇ ಕ್ರಮಕೈಗೊಳ್ಳದೇ ಇರುವ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು; ಈ ವಿಚಾರವನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿದ್ರ್ಯಾಕ್ಷಿಣ್ಯ ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದರು.ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಶಾಸಕರು; ಜಿಲ್ಲೆಯಲ್ಲಿ ನಕಲಿ ಚಾಕಲೇಟ್ ಮಾರಾಟ ವಾಗುತ್ತಿರುವ ಬಗ್ಗೆ ಸುದ್ದಿಯಾಗುತ್ತಿದೆ. ಈ ಚಾಕಲೇಟ್ಗಳು ಎಲ್ಲಿಂದ ಬರುತ್ತಿವೆ? ಈ ಬಗ್ಗೆ ಪರಿಶೀಲನೆ ಮಾಡಿದ್ದೀರಾ; ಏನು ಕ್ರಮಕೈಗೊಂಡಿದ್ದೀರಾ? ಎಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ನಾಗರಿಕ ಆಹಾರ ಸರಬರಾಜು ಇಲಾಖೆ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಅವರು; ಈ ಪ್ರಕರಣದ ಕಾಯ್ದೆ ಪ್ರಕಾರ ತಮ್ಮ ವ್ಯಾಪ್ತಿಗೆ ಬರುವದಿಲ್ಲ; ಆರೋಗ್ಯ ಇಲಾಖೆ ಸಂಬಂಧಿಸಿದೆಂದು ಹೇಳಿದರು. ಆರೋಗ್ಯ ಇಲಾಖೆ ಅಧಿಕಾರಿ ಶಿವಕುಮಾರ್ ಪ್ರತಿಕ್ರಿಯಿಸಿ ಈ ಬಗ್ಗೆ ಎಲ್ಲ ಕಡೆಗಳಲ್ಲೂ ಪರಿಶೀಲನೆ ಮಾಡಲಾಗಿದೆ. ಚಾಕಲೇಟ್ಗಳ ಮಾದರಿಯನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ವರದಿ ಬಂದಿಲ್ಲವೆಂದು ಹೇಳಿದರು.
ಇದರಿಂದ ಕುಪಿತರಾದ ಶಾಸಕರು; ನಕಲಿ ಚಾಕಲೇಟ್ ದಂಧೆ ಕುಶಾಲನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಗ್ಗೆ ಆಂಧ್ರದ ಹೈದರಾಬಾದ್ನಿಂದ ತರಿಸಿಕೊಂಡು ಅದಕ್ಕೆ ಇನ್ನಿತರ ವಸ್ತುಗಳನ್ನು ಸೇರಿಸಿ ಚಾಕಲೇಟ್ ಮಾಡುತ್ತಿರುವ ಬಗ್ಗೆ; ಗೋದಾಮಿನಲ್ಲಿ ಸಂಗ್ರಹ ಇರಿಸಿರುವ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿದೆ. ಆದರೂ ಏನೂ ಕ್ರಮಕೈಗೊಂಡಿಲ್ಲ. ಕನಿಷ್ಟ ದೂರನ್ನಾದರೂ ದಾಖಲಿಸಿದ್ದೀರಾ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿ ದೂರು ದಾಖಲಿಸುವದು ತಮ್ಮ ವ್ಯಾಪ್ತಿಗೆ ಬರುವದಿಲ್ಲ; ಅದನ್ನು ಪೊಲೀಸರು
(ಮೊದಲ ಪುಟದಿಂದ) ಮಾಡಬೇಕೆಂದು ಹೇಳಿದರು. ಪೊಲೀಸರಿಗೆ ಯಾರು ದೂರು ಸಲ್ಲಿಸಬೇಕೆಂಬ ಶಾಸಕ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಅಧಿಕಾರಿಯಲ್ಲಿ ಉತ್ತರವಿರಲಿಲ್ಲ. ಚಾಕಲೇಟ್ ವಿಷಕಾರಿಯಾಗಿ ಯಾರಾದರೂ ಸಾವನ್ನಪ್ಪಿದರೆ ಇದಕ್ಕೆ ಯಾರು ಹೊಣೆ ಎಂಬ ಶಾಸಕ ರಂಜನ್ ಪ್ರಶ್ನೆಗೆ ಯಾರಲ್ಲೂ ಉತ್ತರವಿರಲಿಲ್ಲ.
ಹೈದರಾಬಾದ್ನಿಂದ ಕೋಟಿಗಟ್ಟಲೆ ಚಾಕಲೇಟ್ಗಳು ಸರಬರಾಜಾಗುತ್ತಿದ್ದರೂ ಅದಕ್ಕೆ ಬಳಕೆ ಮಾಡುವ ವಸ್ತುಗಳು ಸಿಕ್ಕಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿ ದ್ದಾರೆಂದರೆ ಪರಿಸ್ಥಿತಿ ಹೇಗಿರ ಬಹುದೆಂದು
ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ; ಪೊಲೀಸ್, ಆದಾಯತೆರಿಗೆ, ಆಹಾರ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿ ರಚನೆ ಮಾಡಿ ಆ ಮೂಲಕ ತನಿಖೆ ನಡೆಸುವಂತಾಗಬೇಕೆಂದು ಸಲಹೆ ಮಾಡಿದರು. ಮತ್ತೆ ಮಾತು ಮುಂದುವರಿಸಿದ ಶಾಸಕ ರಂಜನ್ ಅವರು, ಚಾಕಲೇಟ್ಗಳ ಮಾದರಿ ಸಂಗ್ರಹಿಸಿಟ್ಟುಕೊಂಡಿದ್ದೀರಾ; ಇದ್ದರೆ ಕೊಡಿ ಎಂದು ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಈ ಸಂದರ್ಭ ತಬ್ಬಿಬ್ಬಾದ ಅಧಿಕಾರಿ ಶಿವಕುಮಾರ್ ಅವರು; ಮಾದರಿ ಇಲ್ಲ; ಎಲ್ಲವನ್ನು ಪ್ರಯೋಗಾಲಯಕ್ಕೆ ಕಳುಹಿಸಿರುವದಾಗಿ ಹಾರಿಕೆಯ ಉತ್ತರ ನೀಡಿದರು.
ಮತ್ತಷ್ಟು ಕುಪಿತರಾದ ಶಾಸಕರು, ‘ನಿಮ್ಮಲ್ಲಿ ಇಲ್ಲದಿರಬಹುದು; ನನ್ನಲ್ಲಿ ಇದೆ; ನಾನು ಮಾದರಿ ಸಂಗ್ರಹಿಸಿಟ್ಟುಕೊಂಡಿದ್ದೇನೆ. ಈ ವಿಚಾರವನ್ನು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ತಪ್ಪಿತಸ್ಥ ಅಧಿಕಾರಿಗಳಿಗೆ ಅಲ್ಲಿಂದಲ್ಲೇ ಸಸ್ಪೆಂಡ್ ಆರ್ಡರ್ ಕಳುಹಿಸುತ್ತೇನೆ; ಆವಾಗ ಗೊತ್ತಾಗಲಿದೆ ನಿಮಗೆ’ ಎಂದು ಎಚ್ಚರಿಕೆ ನೀಡಿದರು.