ಸೋಮವಾರಪೇಟೆ, ಜ. 14: ತಾಲೂಕಿನ ಸೂರ್ಲಬ್ಬಿ ನಾಡಿನಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ ದಲ್ಲಿ ಗುರು-ಶಿಷ್ಯರ ಹೃದಯಸ್ಪರ್ಶಿ ಸಮ್ಮಿಲನವಾಯಿತು.

ಸೂರ್ಲಬ್ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ತಮಗೆ ವಿದ್ಯೆ ಕಲಿಸಿದ ಗುರುಗಳ ಸ್ವಾಗತಕ್ಕಾಗಿ ಶಾಲೆ ಮತ್ತು ಶಾಲೆಗೆ ತೆರಳುವ ರಸ್ತೆಯನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.

ಸೂರ್ಲಬ್ಬಿ ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಮಿತಿ ವತಿಯಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯಲ್ಲಿ ತಮಗೆ ಪಾಠ ಕಲಿಸಿದ ಎಲ್ಲಾ ಶಿಕ್ಷಕರನ್ನು ಕಂಡು ನಮಸ್ಕರಿಸಿ ಅಂದಿನ ದಿನಗಳನ್ನು ನೆನಪು ಮಾಡಿಕೊಂಡರು.

ವಿದ್ಯೆ ಕಲಿಸಿದ ಶಿಕ್ಷಕರನ್ನು ಕೊಡವ ಸಂಪ್ರದಾಯದಂತೆ ಮೆರವಣಿಗೆ ಮೂಲಕ ಬರ ಮಾಡಿಕೊಂಡು ಪುಷ್ಪಗಳಿಂದ ಸ್ವಾಗತಿಸಿ ಆರತಿ ಬೆಳಗುವ ಮೂಲಕ ತಮ್ಮ ಗುರುಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಗುರುವಂದನೆಯಲ್ಲಿ ಈ ಎರಡು ಶಾಲೆಗಳಲ್ಲಿ ಸೇವೆ ಸಲ್ಲಿಸಿ ವರ್ಗಗೊಂಡಿರುವ ಮತ್ತು ನಿವೃತ್ತಗೊಂಡ ಶಿಕ್ಷಕರು ಸೇರಿದಂತೆ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ 55 ಮಂದಿ ಶಿಕ್ಷಕರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.

ಸನ್ಮಾನಿತರಾದ ಹಾಸನದ ನಿವೃತ್ತ ಮುಖ್ಯ ಶಿಕ್ಷಕ ಕೆ.ಸಿ. ಚಂದ್ರಶೇಖರ್ ಮಾತನಾಡಿ, 1960-70 ರ ದಶಕದಲ್ಲಿ ಈ ಶಾಲೆಯಲ್ಲಿ ತಾವು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಮೂಲಸೌಲಭ್ಯಗಳ ಕೊರತೆ ನಡುವೆಯೂ ಇಲ್ಲಿನ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಶಾಲೆ ಮತ್ತು ಶಿಕ್ಷಣದ ಬಗ್ಗೆ ಹೊಂದಿದ್ದ ಅಪಾರ ಪ್ರೀತಿ-ವಿಶ್ವಾಸ ಅನುಕರಣೀಯ ವಾದುದು ಎಂದು ಸ್ಮರಿಸಿದರು.

ಸೋಮವಾರಪೇಟೆಯ ನಿವೃತ್ತ ಮುಖ್ಯ ಶಿಕ್ಷಕ ಸಿ.ಎಲ್. ಸುಬ್ಬಯ್ಯ ಮಾತನಾಡಿ, ಕಳೆದ 40-50 ವರ್ಷಗಳ ಹಿಂದೆ ಈ ಊರಿಗೆ ಬಸ್ ಸೌಕರ್ಯವಿಲ್ಲದೆ ದೂರದ ಸ್ಥಳಗಳಿಂದ ಬರುತ್ತಿದ್ದ ಶಿಕ್ಷಕರು ಹಾಗೂ ಗ್ರಾಮಸ್ಥರು ಸೂರ್ಲಬ್ಬಿಯಿಂದ 18 ಕಿ.ಮೀ. ನಡೆದುಕೊಂಡು ಮಾದಾಪುರಕ್ಕೆ ತೆರಳುತ್ತಿದ್ದ ಸನ್ನಿವೇಶದ ಕುರಿತು ನೆನಪಿಸಿಕೊಂಡರು.

ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಗ್ರಾಮಸ್ಥರು ಹಾಗೂ ಶಾಲೆಯ ಹಳೇ ವಿದ್ಯಾರ್ಥಿಗಳು ಶಾಲೆಯ ಪ್ರಗತಿಗೆ ನೀಡುತ್ತಿರುವ ಸಹಕಾರ, ಪ್ರೋತ್ಸಾಹ ಶ್ಲಾಘನೀಯ ವಾದುದು ಎಂದರು.

ಈ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಕಿರಗಂದೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿ.ಪಿ. ಧರ್ಮಪ್ಪ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕುಪ್ಪಾಳು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮ ನಾಯಕ್, ಸುಂಟಿಕೊಪ್ಪ ಸರ್ಕಾರಿ ಪಿಯೂ ಕಾಲೇಜಿನ ಉಪನ್ಯಾಸಕ ಎಸ್.ಹೆಚ್. ಈಶ, ಸನ್ಮಾನಿತರಾದ ಕೆ. ವೆಂಕಟೇಶ್ ನಾಯ್ಕ್, ಈರಪ್ಪ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಳೇ ವಿದ್ಯಾರ್ಥಿಗಳ ಸಮಿತಿಯ ಅಧ್ಯಕ್ಷ ಪುದಿಯತಂಡ ಲೋಕೇಶ್ ಚಂಗಪ್ಪ ಮಾತನಾಡಿ, ಹೆಚ್ಚಿನ ಶಿಕ್ಷಕರು ಗುರುವಂದನೆಗೆ ಆಗಮಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮೆರಗು ನೀಡಿ ಶಿಷ್ಯವರ್ಗಕ್ಕೆ ಸೂಕ್ತ ಮಾರ್ಗದರ್ಶನ ನೀಡಿರುವದು ಸಂತಸ ತಂದಿದೆ ಎಂದರು.

ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಂ. ಸುಂದರಿ, ವಿದ್ಯಾರ್ಥಿಗಳ ಸಮಿತಿಯ ಉಪಾಧ್ಯಕ್ಷ ನಾಪಂಡ ದೊಡ್ಡಯ್ಯ, ಕಾರ್ಯದರ್ಶಿ ತುಂಬುಕುತ್ತೀರ ರಮೇಶ್, ಸಹ ಕಾರ್ಯದರ್ಶಿ ಮೇದುರ ಕಂಠಿ ನಾಣಿಯಪ್ಪ, ಖಜಾಂಚಿ ಮುದ್ದಂಡ ಮಧು, ಸ್ವಾಗತ ಸಮಿತಿಯ ಅಧ್ಯಕ್ಷ ಸುಬ್ಬಯ್ಯ, ಗರ್ವಾಲೆ ಗ್ರಾ.ಪಂ. ಉಪಾಧ್ಯಕ್ಷ ಚಾಮೇರ ಜಿ.ಪಳಂಗಪ್ಪ, ಗ್ರಾಮದ ಮುಖಂಡರಾದ ಮುದ್ದಂಡ ತಿಮ್ಮಯ್ಯ, ಮುದ್ದಂಡ ನಾಣಿಯಪ್ಪ, ಓಡಿಯಂಡ ಸತೀಶ್, ಶಾಲಾ ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರೌಢಶಾಲಾ ಶಿಕ್ಷಕ ರಜಿತ ಹಾಗೂ ತುಂಬುಕುತ್ತೀರ ಸೋಮಯ್ಯ ಕಾರ್ಯಕ್ರಮ ನಿರ್ವಹಿಸಿದರು.

ಇದಕ್ಕೂ ಮುನ್ನ ಸ್ಥಳೀಯರಿಂದ ಕೊಡವ ಸಾಂಪ್ರದಾಯಿಕ ಉಡುಗೆ ಯೊಂದಿಗೆ ಉಮ್ಮತ್ತಾಟ್, ಬೊಳಕಾಟ್ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.