ಮಡಿಕೇರಿ, ಜ. 14: ಪತ್ರಿಕೋದ್ಯಮದ ಶಿಕ್ಷಣ ಮುಗಿಸಿ, ದೃಶ್ಯ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಲು ಬಯಸುವ ವಿದ್ಯಾರ್ಥಿಗಳಿಗೆ ಎಲ್ಲಕ್ಕಿಂತ ಜ್ಞಾನ ಭಂಡಾರ ಅತೀ ಅಗತ್ಯ ಎಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಕಿವಿಮಾತು ಹೇಳಿದರು.
ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗ, ಹಳೆ ವಿದ್ಯಾರ್ಥಿಗಳ ಸಂಘ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‍ಕ್ಲಬ್ ಆಶ್ರಯದಲ್ಲಿ, ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ ‘ಬಹುಮಾಧ್ಯಮ ಕಾರ್ಯಾಗಾರ’ದಲ್ಲಿ ಮೂರನೇ ದಿನ, ಕಾರ್ಯಕ್ರಮ ನಿರೂಪಣೆ ಬಗ್ಗೆ ಸವಿತಾ ರೈ ಮಾತನಾಡಿದರು. ಪತ್ರಿಕೋದ್ಯಮದಲ್ಲಿ ಈಜುವುದು ಅಷ್ಟೊಂದು ಸುಲಭ ಸಾಧ್ಯವಲ್ಲ. ಆದರೆ, ವಿಶೇಷ ಪ್ರತಿಭೆಗಳಿಗೆ ಇಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರು.
ಪತ್ರಕರ್ತ ಜಿ.ವಿ. ರವಿಕುಮಾರ್ ಮಾತನಾಡಿದರು. ಕಾಲೇಜಿನ ಹಿಂದಿನ ಪ್ರಾಂಶುಪಾಲರು ಹಾಗೂ ಕೊಡವ ಅಕಾಡೆಮಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ, ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಚರ್ಮಣ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ, ಪದಾಧಿಕಾರಿ ವಿಘ್ನೇಶ್ ಭೂತನಕಾಡು ಮತ್ತಿತರರು ಹಾಜರಿದ್ದರು. ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು.