ಮಡಿಕೇರಿ, ಜ. 14: ಜಿಲ್ಲೆಯ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮರ್ಪಕ ಕಸ, ತ್ಯಾಜ್ಯ ನಿರ್ವಹಣೆ ಯೊಂದಿಗೆ ಸ್ವಚ್ಛ ಕೊಡಗು ನಿರ್ಮಾಣ ಮಾಡೋಣ, ಜತೆಗೆ ಜೂನ್ ತಿಂಗಳ ಒಳಗಡೆ ಜಿಲ್ಲೆಯ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತಾಗ ಬೇಕೆಂದು ಕೊಡಗು - ಮೈಸೂರು ಸಂಸದ ಪ್ರತಾಪ್ ಸಿಂಹ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು. ಎಲ್ಲ ಕಡೆಗಳಲ್ಲೂ ಕಸದ ಸಮಸ್ಯೆ ಇದೆ; ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಹಲವಷ್ಟು ಸೌಲಭ್ಯಗಳಿವೆ. ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು. ಜಿಲ್ಲೆಯಲ್ಲಿ ರೆಸಾರ್ಟ್‍ಗಳು, ಹೋಂಸ್ಟೇ ಗಳಿರುವದರಿಂದ ಘಟಕ ನಿರ್ಮಾಣ ಅನಿವಾರ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಅವರು; ಈಗಾಗಲೇ 68 ಗ್ರಾ.ಪಂ. ಗಳಲ್ಲಿ ಘಟಕ ನಿರ್ಮಾಣಕ್ಕೆ ಜಾಗ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಮಾರ್ಚ್ ತಿಂಗಳ ಒಳಗಾಗಿ ಎಲ್ಲಾ 104 ಗ್ರಾ.ಪಂ. ಗಳಲ್ಲೂ ಘಟಕ ನಿರ್ಮಾಣವಾಗಲಿದೆ ಎಂದು ಹೇಳಿದರು.ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಮಾತನಾಡಿ; ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಜಾಗ ಗುರುತಿಸಿ ಕೂಡಲೇ ಜಾಗ ವಶಕ್ಕೆ ಪಡೆದು ಬೇಲಿ ಅಥವಾ ಆವರಣ ಗೋಡೆ ನಿರ್ಮಿಸಬೇಕು. ಮಾರ್ಚ್ ಒಳಗಡೆ ಈ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದರು.ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ; ಕಸ ತ್ಯಾಜ್ಯ ವಿಂಗಡಣೆಗೆ ಜನರು ಆಸಕ್ತಿ ತಾಳುತ್ತಿದ್ದಾರೆ. ಆದರೆ ಜಾಗ ಗುರುತಿಸಿ; ಸರ್ವೆ ಮಾಡಿ ಕಾಯ್ದಿರಿಸಲು ಕಷ್ಟ ವಾಗುತ್ತಿದೆ. ಸರ್ವೆಗೆ ಮುಂದಾಗು ವಾಗಲೇ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಜಾಗದ ಸಮಸ್ಯೆ ಇಲ್ಲ; ಆದರೆ ವಿಷಯದ ಬಗ್ಗೆ ಜನರಿಗೆ ತಿಳುವಳಿಕೆ ಇಲ್ಲದೆ ಪ್ರತಿಭಟಿಸುತ್ತಾರೆ. ತಿಳುವಳಿಕೆ ನೀಡುವ ಕಾರ್ಯ ಆಗಬೇಕಿದೆ ಎಂದು ಹೇಳಿದರು. ಈ ಸಂದರ್ಭ ಮಾತನಾಡಿದ ಶಾಸಕ ರಂಜನ್ ಅವರು; ಪ್ರತಿಭಟನೆ ಮಾಡುವವರನ್ನು ಕಸ ತ್ಯಾಜ್ಯ ವಿಂಗಡಣಾ ಘಟಕಗಳಿಗೆ ಕರೆದೊಯ್ದು ಮಾಹಿತಿ ನೀಡುವಂತೆ ಸಲಹೆ ಮಾಡಿದರು.

ಮಡಿಕೇರಿಯಲ್ಲಿ ಕಸಗಳನ್ನು ಸ್ಟೋನ್‍ಹಿಲ್ ಬಳಿಯ ಬೆಟ್ಟದ ಮೇಲೆ ಸುರಿಯಲಾಗುತ್ತಿದೆ. ವಿಂಗಡಣೆ ಕೂಡ ಆಗುತ್ತಿಲ್ಲ. ಕಸದ ರಾಶಿ ಕೆಳಗಡೆ ಇರುವ ವಸತಿ ಪ್ರದೇಶಗಳಿಗೆ ಜಾರುತ್ತಿದೆ. ಈ ನಿಟ್ಟಿನಲ್ಲಿ ಆಸು-ಪಾಸಿನಲ್ಲಿ ಬೇರೆ ಕಡೆ ಜಾಗ ಹುಡುಕಿ ಕಸ ಹಾಕಲು ವ್ಯವಸ್ಥೆ ಮಾಡುವಂತೆ ಶಾಸಕರು ನಗರಸಭಾ ಆಯುಕ್ತರಿಗೆ ಸೂಚನೆ ನೀಡಿದರು. ಪ್ರತಿಕ್ರಿಯಿಸಿದ ಆಯುಕ್ತ ರಮೇಶ್ ಅವರು; ಈಗ ವಿಂಗಡಣೆ ಮಾಡುತ್ತಿರುವದಾಗಿ ಹೇಳಿದರು. ಮದ್ಯಪ್ರವೇಶಿಸಿದ ವಿಧಾನ ಪರಿಷತ್ತು ಸದಸ್ಯ ಸುನಿಲ್ ಸುಬ್ರಮಣಿ ಅವರು; ತಾವು ಶಾಸಕರೊಂದಿಗೆ ಭೇಟಿ ನೀಡಿದ ಸಂದರ್ಭ ವಿಂಗಡಣಾ ಯಂತ್ರ ಚಾಲನೆ ಕೂಡ ಆಗುತ್ತಿರಲಿಲ್ಲವೆಂದು ಹೇಳಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು; ಸ್ಟೋನ್‍ಹಿಲ್ ಬಳಿ ಕಸ ಹಾಕುತ್ತಿರುವದು ದೊಡ್ಡ ಸಮಸ್ಯೆಯಾಗಿದೆ. ಸರಿಪಡಿಸಿದರೆ ತುಂಬಾ ಅನುಕೂಲವಾಗಲಿದೆ. ಇದೀಗ ಕಸ ವಿಂಗಡಣೆ ಮಾಡುತ್ತಿರುವ ದರಿಂದ ಸ್ವಲ್ಪ ಸಮಸ್ಯೆ ಕಡಿಮೆಯಾಗಿದೆ ಎಂದು ಹೇಳಿದರು. ಶಾಸಕ ಸುನಿಲ್ ಸುಬ್ರಮಣಿ ಅವರು;