ಗೋಣಿಕೊಪ್ಪ ವರದಿ, ಜ. 14: ಇರ್ಪು ಜಲಪಾತ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಕೆ. ಜಿ ಬೋಪಯ್ಯ ಹೇಳಿದರು.
ಕುರ್ಚಿ ಗ್ರಾಮದ ಇರ್ಪು ಶ್ರೀ ರಾಮೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯ ಮುಕ್ತಾಯ ಹಂತದಲ್ಲಿರು ವುದರಿಂದ ಜೀರ್ಣೋದ್ಧಾರ ಕಾರ್ಯಕ್ಕೆ ಹೆಚ್ಚಿನ ಅನುದಾನ ಸರ್ಕಾರದಿಂದ ಪಡೆಯುವ ಸಲುವಾಗಿ ಆಯೋಜಿಸಿದ್ದ ಅಭಿವೃದ್ದಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಅನುದಾನದ ಹೊರತಾಗಿ ಗ್ರಾಮಸ್ಥರ ಪ್ರಯತ್ನದಿಂದ ದೇವಾಲಯದ ಅಭಿವೃದ್ಧಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ದೇವಸ್ಥಾನ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕುಟ್ಟ-ಇರ್ಪು ರಾಮೇಶ್ವರ ದೇವಸ್ಥಾನ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯನ್ನು ಪೂರ್ಣ ಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಜಲಪಾತಕ್ಕೆ ತೆರಳುವ ರಸ್ತೆ ಕಾಮಗಾರಿಯಲ್ಲಿ ಗೊಂದಲಗಳನ್ನು ನಿವಾರಿಸಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಇರ್ಪು ಶ್ರೀ ರಾಮೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮದ್ರೀರ ವಿಷ್ಣು ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಮನವಿ ಸಲ್ಲಿಸಿ, ಫೆಬ್ರವರಿ 2 ರಿಂದ ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಿದ್ದತೆ ನಡೆಸಲಾಗುತ್ತಿದೆ. ಶಾಸಕರ ಅನುದಾನ ಹಾಗೂ ಸ್ಥಳೀಯರ ಸಹಾಯದಿಂದ ಈಗಾಗಲೇ ಬಹುತೇಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉಳಿದಿರುವ ಕೆಲವು ಕಾಮಗಾರಿಗೆ ಹಾಗೂ ಮೂಲಭೂತ ಸೌಲಭ್ಯಗಳಿಗೆ ಅನುದಾನದ ಕೊರತೆಯಿದೆ. ಸರ್ಕಾರದ ಕೆಲವು ಅನುದಾನಗಳನ್ನು ಬಳಸಿಕೊಳ್ಳಲು ಅಡಚಣೆಗಳು ಉಂಟಾಗಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ದೇವಸ್ಥಾನದಿಂದ ಜಲಪಾತಕ್ಕೆ ತೆರಳುವ ರಸ್ತೆ ಅಭಿವೃದ್ಧಿಗೆ ರೂ. 50 ಲಕ್ಷ ಅನುದಾನ ಒದಗಿಸಿದೆ. ಆದರೆ ರಸ್ತೆಯ ಕೆಲವು ಪ್ರದೇಶ ದೇವಸ್ಥಾನಕ್ಕೆ ಸೇರಿ ಸ್ವಲ್ಪ ಭಾಗ ಅರಣ್ಯ ಇಲಾಖೆಗೆ ಸೇರಿರುವುದು ಗೊಂದಲಕ್ಕೆ ಕಾರಣವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ದೇವಸ್ಥಾನಕ್ಕೆ ಪಾರ್ಕಿಂಗ್ ಸ್ಥಳ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ರೂ. 50 ಲಕ್ಷ ಅನುದಾನ ಒದಗಿಸಿದೆ. ಆದರೆ ಪ್ರಸ್ತುತ ಅನುದಾನದಲ್ಲಿ ರೂ. 15 ಲಕ್ಷ ಮಾತ್ರ ಇದೆ ಎಂಬ ಮಾಹಿತಿ ಸಿಕ್ಕಿದೆ. ಉಳಿದ ಹಣ ಏನಾಗಿದೆ ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಉತ್ತರಿಸ ಬೇಕಿದೆ. ಈ ನಿಟ್ಟಿನಲ್ಲಿ ಶಾಸಕರು ಮಧ್ಯಪ್ರವೇಶ ಮಾಡಿ ಇರ್ಪು ರಾಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನ ಸೂಕ್ತವಾಗಿ ಬಳಸಿಕೊಳ್ಳಲು ಸಹಕರಿಸಬೇಕು ಎಂದು ಹೇಳಿದರು.
ವರ್ಷಂಪ್ರತಿ ನಡೆಯುವ ಇರ್ಪು ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳ ಆಗಮಿಸುತ್ತಾರೆ. ಆದರೆ ಬಸ್ಸು ತಂಗುದಾಣದ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ದೇವಾಲಯದ ಸಮೀಪ ತಂಗುದಾಣ ನಿರ್ಮಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ತಹಶೀಲ್ದಾರ್ ಪಿ.ಎಸ್ ಮಹೇಶ್, ಉಪ ತಹಶೀಲ್ದಾರ್ ಎ.ಕೆ. ಅಕ್ಕಮ್ಮ, ವೃತ್ತ ನಿರೀಕ್ಷಕ ಪರಶಿವಮೂರ್ತಿ, ಗ್ರಾ.ಪಂ ಅಧ್ಯಕ್ಷೆ ಕಲ್ಪನ, ಪಾರುಪತ್ತೆಗಾರ ಅಜ್ಜಮಾಡ ಅಣ್ಣಯ್ಯ, ಜಿ.ಪಂ. ಮಾಜಿ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ಬಾಳೆಯಡ ಅಶೋಕ್, ಕುಞಂಗಡ ರಮೇಶ್, ಎ.ಕೆ ಮಾಚಯ್ಯ, ಡಾಲಿ, ಸಿ.ಎಂ. ಹ್ಯಾರಿ, ಎ.ಎಂ. ಅಣ್ಣಯ್ಯ, ಟಿ.ಸಿ. ಮಂದಣ್ಣ, ಕೆ.ಎಂ. ಉತ್ತಪ್ಪ, ಮಚ್ಚಾಮಾಡ ಕಾಶಿ, ಬೊಳೇರ ಕುಸುಮ, ಅಜ್ಜಮಾಡ ಪೂಣಚ್ಚ, ಅಜ್ಜಮಾಡ ಉದಯ ಇದ್ದರು. - ಸುದ್ದಿಮನೆ.