ಸೋಮವಾರಪೇಟೆ, ಜ. 14: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವಕ್ಕೆ ನಿನ್ನೆ ಸಂಜೆ ವಿಧ್ಯುಕ್ತ ಚಾಲನೆ ದೊರೆತಿದ್ದು, ತಾ. 16ರಂದು 61ನೇ ಮಹಾರಥೋತ್ಸವ ನಡೆಯಲಿದೆ.

ನಿನ್ನೆ ಸಂಜೆ ದೇವಾಲಯ ಧರ್ಮದರ್ಶಿ ಮಂಡಳಿ ಮತ್ತು ಗ್ರಾಮಸ್ಥರಿಂದ ಜಾತ್ರಾ ಪ್ರಾರಂಭೋತ್ಸವ ಪೂಜೆಯೊಂದಿಗೆ ಪ್ರಸಕ್ತ ವರ್ಷದ ಜಾತ್ರೆಗೆ ಚಾಲನೆ ನೀಡಲಾಗಿದ್ದು, ಇಂದು ಮಕರ ಸಂಕ್ರಮಣ ಕರುವಿನ ಹಬ್ಬದಂದು ಗರುಡಗಂಭದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪ ಬೆಳಗಿಸಲಾಯಿತು.

ನಂತರ ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ ನಡೆದವು. ತಾ. 15ರಂದು(ಇಂದು) ಅರಸು ಬಲ ಸೇವೆ, ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಜರುಗಲಿದೆ.

ತಾ. 16ರಂದು ಮಧ್ಯಾಹ್ನ 12.05ಕ್ಕೆ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ 61ನೇ ಮಹಾ ರಥೋತ್ಸವ ಜರುಗಲಿದ್ದು, ನಂತರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ. ಪ್ರಸಕ್ತ ವರ್ಷ ತಾ. 15, 16 ಮತ್ತು 17ರಂದು ಮೂರು ದಿನಗಳ ಕಾಲ ದೇವಾಲಯದಲ್ಲಿ ಮಧ್ಯಾಹ್ನ 12.10ರಿಂದ 2.30ರವರೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಮುಖರು ಮಾಹಿತಿ ನೀಡಿದ್ದಾರೆ.

ತಾ. 16ರಂದು ಮಧ್ಯಾಹ್ನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡೊಳ್ಳುಕುಣಿತ, ಕಂಸಾಳೆ ಮತ್ತು ಗೊಂಬೆ ಕುಣಿತದ ಆಕರ್ಷಣೆ ಇದ್ದು, ರಾತ್ರಿ 7 ಗಂಟೆಗೆ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ, ವೇದಮೂರ್ತಿ ಶಿಬರೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಲಿವೆ.

ತಾ. 17ರಂದು ಮಹಾ ಸಂಪ್ರೋಕ್ಷಣೆ, ವಿವಿಧ ಅರ್ಚನೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ, ಮಂಗಳ ಪ್ರಾರ್ಥನೆ ನಡೆಯಲಿದೆ. ಅಂದು ಬೆಳಗ್ಗೆ 10 ರಿಂದ 12.30ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಸ್ಪರ್ಧೆ ಆಯೋಜಿಸಲಾಗಿದೆ.

ಅಪರಾಹ್ನ 2 ಗಂಟೆಗೆ ಜಾತ್ರಾ ಮುಕ್ತಾಯ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಘುಕುಮಾರ್ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ.

ಮಹಾರಥೋತ್ಸವದ ಅಂಗವಾಗಿ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ತಾ. 15 ಮತ್ತು 16ರಂದು(ಇಂದು ಮತ್ತು ನಾಳೆ) ಅಂತರ್‍ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟಗಳು ನಡೆಯಲಿವೆ. ಇದರೊಂದಿಗೆ ಕೃಷಿ ಸೇರಿದಂತೆ ವಿವಿಧ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.