ಮಡಿಕೇರಿ, ಜ. 14: ಪತ್ರಕರ್ತ ಎಂದರೆ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮುಜುಗರವಿರ ಬಾರದು. ಪತ್ರಕರ್ತ ಮಾಹಿತಿ, ತಂತ್ರಜ್ಞಾನ ಬಳಸಿಕೊಂಡು ಸಮಾಜಕ್ಕೆ ಉತ್ತಮ ಮಾಹಿತಿಯನ್ನು ನೀಡು ವಂತಾಗಬೇಕು ಎಂದು ಪತ್ರಕರ್ತ ಸಿ.ಜೆ. ರಾಜೀವ್ ಅವರು ‘ಪತ್ರಿಕೋದ್ಯಮ ಶಿಕ್ಷಣ ಮತ್ತು ವೃತ್ತಿಪರತೆ’ ಕುರಿತು ಮಾತನಾಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗ, ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹು ಮಾಧ್ಯಮ ಕಾರ್ಯಾಗಾರವು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಪತ್ರಿಕೋದ್ಯಮದಲ್ಲಿ ಅನೇಕ ವೃತ್ತಿಗಳಿವೆ. ಕನ್ನಡವನ್ನು ಸ್ಪಷ್ಟವಾಗಿ ಕಲಿಯಬೇಕು. ಸಮಾಜ ಪತ್ರಿಕೋದ್ಯಮವನ್ನು ನಾಲ್ಕನೇ ಅಂಗ ಎಂದು ಸ್ವೀಕರಿಸಿದೆ. ಸಾವಿರಾರು ಮಂದಿ ಪದವಿ ಪಡೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಹಲವಾರು ಅವಕಾಶಗಳಿವೆ. ಅನುವಾದ ಗೊತ್ತಿರುವವರು ಭಯಪಡುವ ಅಗತ್ಯವಿಲ್ಲ. ಎಲ್ಲಾ ತಾಂತ್ರಿಕ ಪದಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದಿರಬೇಕು ಎಂದು ಅವರು ಹೇಳಿದರು.
ಪ್ರಜಾಸತ್ಯ ಪತ್ರಿಕೆ ಸಂಪಾದಕ ಡಾ. ಬಿ.ಸಿ. ನವೀನ್ ಕುಮಾರ್ ಅವರು ‘ಕೃಷಿ, ರಾಜಕೀಯ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ’ ಕುರಿತು ಮಾತನಾಡಿ ಪತ್ರಕರ್ತರಿಗೆ ಸಮಯ ಪ್ರಜ್ಞೆ, ಸ್ಥಿತ ಪ್ರಜ್ಞೆ, ಹಾಸ್ಯ ಪ್ರಜ್ಞೆ ಇರಬೇಕು. ಪತ್ರಕರ್ತರ ವೃತ್ತಿಯಿಂದ ಆತ್ಮತೃಪ್ತಿ ದೊರಕುತ್ತದೆ. ಸಮಾಜಸೇವೆ ಮಾಡುವುದು ಸಾಮಾಜಿಕ ಹರಿಕಾರರಾಗಿ ಕೆಲಸ ಮಾಡಬಹುದು ಎಂದು ಹೇಳಿದರು.
ಪ್ರತೀ ವೃತ್ತಿಯಲ್ಲಿ ಅದರದ್ದೇ ಆದ ವೃತ್ತಿಪರತೆ ಇದ್ದಾಗ ಮಾತ್ರ ಸಾಮಾಜಿಕ ನ್ಯಾಯ ಮತ್ತು ಜನಮುಖಿಯಾಗಿ ಕೆಲಸ ಮಾಡಲು ಸಾಧ್ಯ ಎಂದು ನವೀನ್‍ಕುಮಾರ್ ಹೇಳಿದರು.
ಕೃಷಿ ಬಗ್ಗೆ ಮಾಹಿತಿ ನೀಡಿದ ಅವರು ಕೃಷಿಗೆ ಹನ್ನೆರಡು ಸಾವಿರ ವರ್ಷಗಳ ಇತಿಹಾಸವಿದೆ. ಕೃಷಿಯು ಅನಂತತೆ ಮತ್ತು ಅಗಾಧತೆಯನ್ನು ಹೊಂದಿದ್ದು, ಅದನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮಲ್ಲಿ ಸಾಕಷ್ಟು ಭೂಮಿ, ನೀರು, ಸರ್ಕಾರಿ ಯೋಜನೆಗಳು, ಸಾಲ ಸೌಲಭ್ಯ, ಸಬ್ಸಿಡಿ ಮತ್ತು ಯಾಂತ್ರೀಕರಣ ವ್ಯವಸ್ಥೆ ಇದ್ದರೂ ಕೂಡ ನಾವು ಇನ್ನೂ ಸಾಂಪ್ರದಾಯಿಕ ಕೃಷಿ, ಬ್ಯಾಂಕ್ ಸಾಲ ಹಾಗೂ ಸಬ್ಸಿಡಿಯ ಹಿತದೃಷ್ಟಿಯಲ್ಲಿ ಮಾತ್ರ ಕೃಷಿಯನ್ನು ನೋಡುತ್ತಿದ್ದೇವೆ ಎಂದು ನವೀನ್‍ಕುಮಾರ್ ಹೇಳಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ಎಫ್‍ಎಂಸಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು, ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಇಳೆಯರಾಜ ಇತರರು ಪಾಲ್ಗೊಂಡಿದ್ದರು. ಪುಣ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.