ಶನಿವಾರಸಂತೆ, ಜ. 14: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ತಾ. 19 ರಂದು ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಕೆಲವು ಸದಸ್ಯರ ಹೆಸರುಗಳನ್ನು ಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದೆ ಎಂದು ಸದಸ್ಯರುಗಳು ಆರೋಪಿಸಿದ್ದಾರೆ.

ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಸಂಘದ ಅಂತಿಮ ಮತದಾರರ ಪಟ್ಟಿಯಲ್ಲಿ ಹಲವಾರು ಲೋಪದೋಷಗಳು ಕಂಡುಬಂದಿದೆ ಎಂದು ಸಂಘದ ಕೆಲವು ಸದಸ್ಯರುಗಳು ಆರೋಪ ಮಾಡುತ್ತಿದ್ದು, ಕೆಲವು ಸದಸ್ಯರುಗಳು ಪರಿಶೀಲನೆಗೆ ಸಂಘಕ್ಕೆ ಬಂದಿದ್ದು, ನ್ಯೂನತೆಗಳು ಆಗಿರುವುದು ದೃಢಪಟ್ಟಿದೆ.

ವಕೀಲ ಮಹಂತೇಶ್ ಅವರು ಪರಿಶೀಲನೆ ನಡೆಸಿದಾಗ, ತಾತ್ಕಾಲಿಕ ಮತದಾರರ ಪಟ್ಟಿಯಲ್ಲಿ ಇವರ ಹೆಸರನ್ನು ನಮೂದಿಸಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಇವರ ಹೆಸರನ್ನು ಕೈ ಬಿಡಲಾಗಿದೆ. ಯಾವ ಕಾರಣಕ್ಕಾಗಿ ಅಂತಿಮ ಮತದಾರರ ಪಟ್ಟಿಯಿಂದ ನನ್ನ ಹೆಸರನ್ನೇಕೆ ಬಿಡಲಾಗಿದೆ ಎಂದು ಸ್ಪಷ್ಟೀಕರಣ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಲಿಖಿತ ಮೂಲಕ ಕೇಳಲಾಗಿ, ಮತದಾರರ ಪಟ್ಟಿ ತಯಾರು ಮಾಡುವಾಗ ಕೈ ತಪ್ಪಿನಿಂದ ಹೆಸರು ಬಿಟ್ಟು ಹೋಗಿದೆ ಎಂದು ಹಿಂಬರಹ ನೀಡಿರುತ್ತಾರೆ.

ಇಂತಹ ಪ್ರಕರಣಗಳು ಹಲವಾರು ನಡೆದಿರಬಹುದೆಂದು ಸದಸ್ಯರುಗಳು ಸಂಶಯ ವ್ಯಕ್ತಪಡಿಸುತ್ತಿದ್ದು, ವಂಚಿತ ಸದಸ್ಯರುಗಳು ಅಧಿಕ ಸಂಖ್ಯೆಯಲ್ಲಿ ವಿಚಾರಣೆಗಾಗಿ ಸಂಘಕ್ಕೆ ಬರುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಅರ್ಹ ಮತದಾರರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ಸದಸ್ಯರುಗಳಾದ ಎಸ್.ಎನ್. ರಘು, ಎಸ್.ಎಂ. ನಟರಾಜ್, ಎ.ಆರ್. ರಕ್ಷಿತ, ಡಿ.ಎಸ್. ಮಂಜುನಾಥ, ಅರವಿಂದ್, ಭಾಗ್ಯಮ್ಮ, ಭುವನೇಶ್ವರಿ, ಸಿ.ಪಿ. ಹರೀಶ್, ಕೃಷ್ಣಮೂರ್ತಿ ಹಾಗೂ ಇತರರು ಪತ್ರಿಕಾ ಹೇಳಿಕೆ ನೀಡಿದ್ದಾರೆ.